ಸೌಥಂಪ್ಟನ್: ಕೋವಿಡ್-19 ಕಾಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಇಯಾನ್ ಮಾರ್ಗನ್ ಪಡೆ ಆರು ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ ವಿಶ್ವಕಪ್ ಸೂಪರ್ ಲೀಗ್ ನಲ್ಲಿ ಇಂಗ್ಲೆಂಡ್ ಪಡೆ ಶುಭಾರಂಭ ಮಾಡಿದೆ.
ರೋಸ್ ಬೌಲ್ ಅಂಗಳದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ಗೆ ವೇಗಿ ಡೇವಿಡ್ ವಿಲ್ಲೆ ಉತ್ತಮ ಆರಂಭ ನೀಡಿದರು. ಏಳು ಓವರ್ ಮುಗಿಯುವಷ್ಟರಲ್ಲಿ ಐರ್ಲೆಂಡ್ ನ ಮೊದಲ ಐದು ವಿಕೆಟ್ ಕಳೆದುಕೊಂಡಿತು. ಕೆವಿನ್ ಒಬ್ರಿಯಾನ್ 22 ರನ್ ಗಳಿಸಿದರು.
ಮೊದಲ ಪಂದ್ಯವಾಡಲಿಳಿದ ಕರ್ಟಿಸ್ ಕಾಂಫರ್ ಅಜೇಯ 59 ರನ್ ಗಳಿಸಿ ಐರ್ಲೆಂಡ್ ನ ಮಾನ ಉಳಿಸಿದರು. ಆಂಡಿ ಮಕ್ರಾತಿ 40 ರನ್ ಬಾರಿಸಿದರು. ಅಂತಿಮವಾಗಿ ಐರ್ಲೆಂಡ್ 44 ಓವರ್ ನಲ್ಲಿ 172 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಡೇವಿಡ್ ವಿಲ್ಲೆ ಐದು ವಿಕೆಟ್ ಪಡೆದರೆ, ಸಖಿಬ್ ಮೆಹಮೂದ್ ಎರಡು ವಿಕೆಟ್, ಆದಿಲ್ ರಶೀದ್ ಮತ್ತು ಟಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ಜಾನಿ ಬೆರಿಸ್ಟೋ ವಿಕೆಟ್ ಕಳೆದುಕೊಂಡಿತು. ಜೇಸನ್ ರಾಯ್ 24 ರನ್ ಗಳಿಸಿದರೆ, ಜೇಮ್ಸ್ ವಿನ್ಸಿ 25 ರನ್ ಗಳಿಸಿದರು. ಒಂದು ಹಂತದಲ್ಲಿ 59 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಗೆ ಆಸರೆಯಾಗಿದ್ದು, ಸ್ಯಾಮ್ ಬಿಲ್ಲಿಂಗ್ ಮತ್ತು ನಾಯಕ ಮಾರ್ಗನ್. ಬಿಲ್ಲಿಂಗ್ ಅಜೇಯ 67 ರನ್ ಗಳಿಸಿದರೆ, ಮಾರ್ಗನ್ ಅಜೇಯ 36 ರನ್ ಗಳಿಸಿದರು.
ಇಂಗ್ಲೆಂಡ್ ನಾಲ್ಕು ವಿಕೆಟ್ ಕಳೆದುಕೊಂಡು 27.5 ಓವರ್ ನಲ್ಲಿ ವಿಜಯಿಯಾಯಿತು.