Advertisement
ಗೆಲುವಿಗಾಗಿ 462 ರನ್ನುಗಳ ಕಠಿನ ಸವಾಲು ಪಡೆದಿದ್ದ ಶ್ರೀಲಂಕಾ, ಪಂದ್ಯದ 4ನೇ ದಿನವಾದ ಶುಕ್ರವಾರ 85.1 ಓವರ್‌ಗಳಲ್ಲಿ ಭರ್ತಿ 250 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಫ್ಸ್ಪಿನ್ನರ್ ಮೊಯಿನ್ ಅಲಿ 71ಕ್ಕೆ 4 ಹಾಗೂ ಎಡಗೈ ಸ್ಪಿನ್ನರ್ ಜಾಕ್ ಲೀಚ್ 60ಕ್ಕೆ 3 ವಿಕೆಟ್ ಕಳಚಿ ಲಂಕಾ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಸಾಮಾನ್ಯವಾಗಿ ಏಶ್ಯದ ಟ್ರ್ಯಾಕ್‌ಗಳಲ್ಲಿ ಚಡಪಡಿಸುವ ಆಂಗ್ಲರ ಪಡೆ, ಗಾಲೆಯಲ್ಲಿ ಸ್ಪಿನ್ ಮೂಲಕವೇ ಲಂಕೆಗೆ ಬಲೆ ಬೀಸಿದ್ದೊಂದು ವಿಶೇಷ. ಇದಕ್ಕೂ ಮುನ್ನ ಏಕದಿನ ಸರಣಿಯನ್ನು 3-1, ಟಿ20 ಸರಣಿಯನ್ನು 1-0 ಅಂತರದಿಂದ ಇಂಗ್ಲೆಂಡ್ ವಶಪಡಿಸಿಕೊಂಡಿತ್ತು.
ಇದು ಗಾಲೆಯಲ್ಲಿ ಇಂಗ್ಲೆಂಡಿಗೆ ಒಲಿದ ಮೊದಲ ಟೆಸ್ಟ್ ಗೆಲುವು. ಕಳೆದ 14 ವಿದೇಶಿ ಟೆಸ್ಟ್‌ಗಳಲ್ಲಿ ಸಾಧಿಸಿದ ಮೊದಲ ಜಯ ಕೂಡ ಹೌದು. ಇಂಗ್ಲೆಂಡ್ ಕೊನೆಯ ಸಲ ವಿದೇಶದಲ್ಲಿ ಟೆಸ್ಟ್ ಜಯಿಸಿದ್ದು 2016ರಲ್ಲಿ. ಅದು ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್ ಪಂದ್ಯವಾಗಿತ್ತು. ಅಂತರ 22 ರನ್. ವಿಕೆಟ್ ನಷ್ಟವಿಲ್ಲದೆ 15 ರನ್ ಮಾಡಿದಲ್ಲಿಂದ ಶ್ರೀಲಂಕಾ 4ನೇ ದಿನದಾಟ ಆರಂಭಿಸಿತ್ತು. ದಿಮುತ್ ಕರುಣರತ್ನೆ (26)-ಕೌಶಲ ಸಿಲ್ವ (30) ಮೊದಲ ವಿಕೆಟಿಗೆ 51 ರನ್ ಪೇರಿಸುವಲ್ಲಿ ಯಶಸ್ವಿಯಾದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು. ಲಂಚ್ ವೇಳೆ 98 ರನ್ನಿಗೆ 3 ವಿಕೆಟ್ ಬಿತ್ತು. ಆರಂಭಿಕರಿಬ್ಬರ ಜತೆ ಧನಂಜಯ ಡಿ’ಸಿಲ್ವ (21) ಕೂಡ ಆಟ ಮುಗಿಸಿದ್ದರು.ಮಧ್ಯಮ ಕ್ರಮಾಂಕದಲ್ಲಿ ಕುಸಲ್ ಮೆಂಡಿಸ್ (45) ಮತ್ತು ಏಂಜೆಲೊ ಮ್ಯಾಥ್ಯೂಸ್ (53) ಸ್ವಲ್ಪ ಕಾಲ ಕ್ರೀಸ್ ಆಕ್ರಮಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಟೀ ವೇಳೆಗೆ 190ಕ್ಕೆ 5 ವಿಕೆಟ್ ಉರುಳಿತು; ಲಂಕೆಯ ಸೋಲು ಖಾತ್ರಿಯಾಯಿತು.
Related Articles
Advertisement
ಇಂಗ್ಲೆಂಡ್ ಕೀಪರ್ ಬೆನ್ ಫೋಕ್ಸ್ ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಒಂದು ಶತಕ ಸಹಿತ 144 ರನ್, 2 ಕ್ಯಾಚ್, ಒಂದು ಸ್ಟಂಪಿಂಗ್ ಹಾಗೂ ಒಂದು ರನೌಟ್ ಮಾಡಿದ ಸಾಹಸ ಫೋಕ್ಸ್ ಅವರದಾಗಿತ್ತು. ಸರಣಿಯ 2ನೇ ಟೆಸ್ಟ್ ನ. 14ರಿಂದ ಕ್ಯಾಂಡಿಯಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-342 ಮತ್ತು 6 ವಿಕೆಟಿಗೆ 322 ಡಿಕ್ಲೇರ್. ಶ್ರೀಲಂಕಾ-203 ಮತ್ತು 250 (ಮ್ಯಾಥ್ಯೂಸ್ 53, ಮೆಂಡಿಸ್ 45, ಸಿಲ್ವ 30, ಪೆರೆರ 30, ಅಲಿ 71ಕ್ಕೆ 4, ಲೀಚ್ 60ಕ್ಕೆ 3). ಪಂದ್ಯಶ್ರೇಷ್ಠ: ಬೆನ್ ಫೋಕ್ಸ್.