Advertisement

‘ವಿಸ್ಡನ್‌’ಗೆ ವಿದಾಯ; ‘ರಿಚರ್ಡ್ಸ್‌-ಬೋಥಂ’ನೂತನ ಟ್ರೋಫಿ

01:38 AM Jul 25, 2020 | Hari Prasad |

ಲಂಡನ್: ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿ ವಿಜೇತರಿಗೆ ನೀಡಲಾಗುತ್ತಿದ್ದ ‘ವಿಸ್ಡನ್‌ ಟ್ರೋಫಿ’ ಇನ್ನು ನೇಪಥ್ಯಕ್ಕೆ ಸರಿಯಲಿದೆ.

Advertisement

ಈಗ ಸಾಗುತ್ತಿರುವ ಇತ್ತಂಡಗಳ ನಡುವಿನ ಸರಣಿ ವಿಜೇತರಿಗೆ ಕೊನೆಯದಾಗಿ ಈ ಟ್ರೋಫಿ ನೀಡಲಾಗುತ್ತದೆ.

ಮುಂಬರುವ ಸರಣಿಯಿಂದ ‘ರಿಚರ್ಡ್ಸ್‌-ಬೋಥಂ ಟ್ರೋಫಿ’ ಅಸ್ತಿತ್ವಕ್ಕೆ ಬರಲಿದೆ ಎಂದು ಇಸಿಬಿ ತಿಳಿಸಿದೆ.

70-80ನೇ ದಶಕದ ವಿಂಡೀಸ್‌ ಮತ್ತು ಇಂಗ್ಲೆಂಡಿನ ಮಹಾನ್‌ ಕ್ರಿಕೆಟಿಗರಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಮತ್ತು ಸರ್‌ ಇಯಾನ್‌ ಬೋಥಂ ಅವರಿಗೆ ಗೌರವ ಸಲ್ಲಿಸುವುದು ಇಸಿಬಿಯ ಉದ್ದೇಶವಾಗಿದೆ.

ಬ್ಯಾಟಿಂಗ್‌ ದೈತ್ಯನೆನಿಸಿದ ವಿವ್‌ ರಿಚರ್ಡ್ಸ್‌ ‘ಕೆರಿಬಿಯನ್‌ ಕ್ರಿಕೆಟಿಗರ ಬಿಗ್‌ ಹಿಟ್ಟಿಂಗ್‌ ಕುಟುಂಬ’ದ ಪ್ರಮುಖ ಸದಸ್ಯ. 121 ಟೆಸ್ಟ್‌ಗಳಿಂದ 8,540 ರನ್‌ ಹಾಗೂ 187 ಏಕದಿನ ಪಂದ್ಯಗಳಿಂದ 6,721 ರನ್‌ ಪೇರಿಸಿದ ಸಾಹಸಿ. ಒಟ್ಟು 35 ಶತಕಗಳನ್ನು ಸಿಡಿಸಿದ ಪರಾಕ್ರಮಿ. ರಿಚರ್ಡ್ಸ್‌ ಕ್ರೀಸಿಗಿಳಿದರೆಂದರೆ ಎದುರಾಳಿ ಬೌಲರ್‌ಗಳಲ್ಲಿ ಢವಢವ!

Advertisement

ಇಯಾನ್‌ ಬೋಥಂ ವಿಶ್ವ ಕ್ರಿಕೆಟಿನ ಅಮೋಘ ಸವ್ಯಸಾಚಿ. ಟೆಸ್ಟ್‌ನಲ್ಲಿ 5,200 ರನ್‌ ಮತ್ತು 383 ವಿಕೆಟ್‌ ಉರುಳಿಸಿದ ಹಿರಿಮೆ ಬೋಥಂ ಅವರದಾಗಿದೆ. ಏಕದಿನದಲ್ಲಿ 2,113 ರನ್‌ ಮತ್ತು 145 ವಿಕೆಟ್‌ ಸಂಪಾದಿಸಿದ್ದಾರೆ. ವಿಂಡೀಸ್‌ ವಿರುದ್ಧ 61 ಟೆಸ್ಟ್‌ ವಿಕೆಟ್‌ ಉರುಳಿಸಿದ್ದಾರೆ.

ನನ್ನ ಆತ್ಮೀಯ ಗೆಳೆಯ
ಇದು ತಮ್ಮಿಬ್ಬರ ಕ್ರಿಕೆಟ್‌ ಸಾಧನೆಗೆ ಸಂದ ಗೌರವ ಎಂಬುದಾಗಿ ರಿಚರ್ಡ್ಸ್‌ ಪ್ರತಿಕ್ರಿಯಿಸಿದ್ದಾರೆ. ‘ನಾನು ಮೊಟ್ಟ ಮೊದಲ ಸಲ ಸಾಮರ್‌ಸೆಟ್‌ ಕೌಂಟಿಯಲ್ಲಿ ಆಡಲು ಇಂಗ್ಲೆಂಡಿಗೆ ತೆರಳಿದಾಗ ಮೊದಲು ಭೇಟಿಯಾದವರಲ್ಲಿ ಬೋಥಂ ಮೊದಲಿಗರು. ಬಳಿಕ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು, ಜೀವದ ಗೆಳೆಯರೆನಿಸಿದೆವು. ಈಗ ಟ್ರೋಫಿ ರೂಪದಲ್ಲಿ ಈ ನಂಟು ಹೆಚ್ಚು ಗಟ್ಟಿಯಾಗಿದೆ’ ಎಂದು ರಿಚರ್ಡ್ಸ್‌ ಪ್ರತಿಕ್ರಿಯಿಸಿದ್ದಾರೆ.

1963ರಲ್ಲಿ ವಿಸ್ಡನ್‌ ವಾರ್ಷಿಕಾಂಕದ 100ನೇ ಆವೃತ್ತಿಯ ಸವಿನೆನಪಿಗಾಗಿ ಇತ್ತಂಡಗಳ ನಡುವಿನ ಸರಣಿ ವಿಜೇತರಿಗೆ ‘ವಿಸ್ಡನ್‌ ಟ್ರೋಫಿ’ ನೀಡಲು ನಿರ್ಧರಿಸಲಾಗಿತ್ತು. ಮೂಲ ಟ್ರೋಫಿ ಈಗ ಲಾರ್ಡ್ಸ್‌ನ ‘ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌’ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next