ಗಾಲೆ: ಸ್ಪಿನ್ನರ್ ಡಾಮ್ ಬೆಸ್ ಮತ್ತು ವೇಗಿ ಸ್ಟುವರ್ಟ್ ಬ್ರಾಡ್ ದಾಳಿಗೆ ತತ್ತರಿಸಿದ ಶ್ರೀಲಂಕಾ, ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನ 135 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದಿದೆ.
ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ಆರಂಭಿಕರನ್ನು ಕೇವಲ 17 ರನ್ನಿಗೆ ಕಳೆದುಕೊಂಡಿತಾದರೂ ಜೋ ರೂಟ್ (ಬ್ಯಾಟಿಂಗ್ 66) ಮತ್ತು ಜಾನಿ ಬೇರ್‌ಸ್ಟೊ (ಬ್ಯಾಟಿಂಗ್ 47) ಅವರ ಅಮೋಘ ಜತೆಯಾಟದ ನೆರವಿನಿಂದ 2 ವಿಕೆಟಿಗೆ 127 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.
ಡಾಮ್ ಬೆಸ್ 30 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ ದ್ವಿತೀಯ ನಿದರ್ಶನ ಇದಾಗಿದೆ. ಆತಿಥೇಯರ ಅಗ್ರ ಸರದಿಯ ಮೇಲೆ ದಾಳಿಗೈದ ಬ್ರಾಡ್ ಸಾಧನೆ 20ಕ್ಕೆ 3 ವಿಕೆಟ್.
ವುಡ್ “ರಿಪ್ಪರ್’ ಎಸೆತಕ್ಕೆ ಮ್ಯಾಥ್ಯೂಸ್ ಬ್ಯಾಟ್ 2 ಪೀಸ್! :
ಇಂಗ್ಲೆಂಡಿನ ಮಾರ್ಕ್ ವುಡ್ ಸಮಕಾಲೀನ ಕ್ರಿಕೆಟಿನ ಘಾತಕ ವೇಗಿ ಎನಿಸಿಕೊಂಡಿದ್ದಾರೆ. ಇವರ ಬಹುತೇಕ ಎಸೆತಗಳು 90 ಮೈಲುಗಳ ವೇಗವನ್ನು ಹೊಂದಿರುತ್ತವೆ. ಇದಕ್ಕೆ ಗಾಲೆ ಟೆಸ್ಟ್ ಪಂದ್ಯದಲ್ಲಿ ಉತ್ತಮ ನಿದರ್ಶನವೊಂದು ಸಿಕ್ಕಿತು. ವುಡ್ ಅವರ 91 ಮೈಲು ವೇಗದ “ರಿಪ್ಪರ್’ ಎಸೆತವೊಂದಕ್ಕೆ ಮ್ಯಾಥ್ಯೂಸ್ ಬ್ಯಾಟ್ ಎರಡು ತುಂಡಾಯಿತು!
ಪಂದ್ಯದ 10ನೇ ಓವರಿನ 5ನೇ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಇದು ವುಡ್ ಅವರ ಮೊದಲ ಓವರ್ ಕೂಡ ಆಗಿತ್ತು.