Advertisement

ಇಂಗ್ಲೆಂಡಿನ‌ ಕತೆ: ಬೆಕ್ಕು ತಂದ ಭಾಗ್ಯ

07:30 AM Mar 18, 2018 | Team Udayavani |

ಒಂದು ಹಳ್ಳಿಯಲ್ಲಿ ಜೇಮ್ಸ್‌ ಎಂಬ ಹುಡುಗನಿದ್ದ. ಅವನ ತಂದೆ ಹೊಲದಲ್ಲಿ ದಿನವಿಡೀ ಶ್ರಮಪಟ್ಟು ದುಡಿದು ಆಹಾರ ಧಾನ್ಯಗಳನ್ನು ಬೆಳೆದು ತರುತ್ತಿದ್ದ. ಆದರೆ ಜೇಮ್ಸ್‌ ಶುದ್ಧ ಸೋಮಾರಿ. ಶಾಲೆಗೆ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ. ಹೊಲದ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಿರಲಿಲ್ಲ. ಮೂರು ಹೊತ್ತು ಹೊಟ್ಟೆ ತುಂಬ ತಿನ್ನುತ್ತಿದ್ದ. ಹಾಯಾಗಿ ಮಲಗುತ್ತಿದ್ದ. ಅವನ ತಂದೆ ಇದನ್ನು ಸಹಿಸದೆ, “”ನಾನೊಬ್ಬನೇ ಬಿಸಿಲು, ಮಳೆಯೆಂದಿಲ್ಲದೆ ಹೊಲದಲ್ಲಿ ದುಡಿಯಲು ತುಂಬ ತ್ರಾಸವಾಗುತ್ತದೆ. ನೀನೂ ನ್ನೊಂದಿಗೆ ಬಂದು ಸ್ವಲ್ಪ$ಸಹಾಯ ಮಾಡಬಾರದೆ?” ಎಂದು ಕೇಳಿದ. ಜೇಮ್ಸ್‌, “”ಏನಿದು ನಿನ್ನ ಮಾತು? ನಾನೀಗ ಒಂದು ಕನಸು ಕಂಡೆ. ಅದರಲ್ಲಿ ನನಗೆ ಮಹಾನಗರದ ಅಧ್ಯಕ್ಷ ಸ್ಥಾನ ದೊರಕಿತ್ತು. ನಾನು ಆಡಳಿತ ಮಾಡುತ್ತಿದ್ದೆ. ಬೆಳಗಿನ ಜಾವ ಕಂಡ ಕನಸು ಸುಳ್ಳಾಗುವುದಿಲ್ಲ ಎನ್ನುತ್ತಾರೆ. ಇಷ್ಟು ದೊಡ್ಡ ಯೋಗ್ಯತೆ ಇರುವವನು ಹೊಲಕ್ಕೆ ಬಂದು ಕೈ ಕೆಸರು ಮಾಡಿಕೊಳ್ಳುವುದೆ? ಸರ್ವಥಾ ಸಾಧ್ಯವಿಲ್ಲ” ಎಂದು ಹೇಳಿದ.

Advertisement

    ಆದರೆ ಎಷ್ಟು ದಿನ ಕಾದರೂ ರೈತನಿಗೆ ತನ್ನ ಮಗ ನಗರಸಭೆಯ ಅಧ್ಯಕ್ಷನಾಗುವುದು ಕಾಣಿಸಲಿಲ್ಲ. ತಾನು ದುಡಿದು ತಂದುದನ್ನೆಲ್ಲ ಖಾಲಿ ಮಾಡಿ ಗೊರಕೆ ಹೊಡೆಯವುದು ಬಿಟ್ಟರೆ ಬೇರೆ ಏನನ್ನೂ ಜೇಮ್ಸ್‌ ಮಾಡದಿರುವುದು ನೋಡಿ ನೋಡಿ ಅವನಿಗೂ ಸಾಕಾಯಿತು. ಕೋಪದಿಂದ ಒಂದು ದಿನ ಮಗನಿಗೆ ಚೆನ್ನಾಗಿ ಹೊಡೆದ. ಮನೆಯಿಂದ ಹೊರಗೆ ದೂಡಿದ. “”ಮನೆಗೆ ಕಾಸಿನ ಪ್ರಯೋಜನವೂ ಇಲ್ಲದೆ ನನ್ನ ಶ್ರಮದಲ್ಲೇ ಬದುಕುತ್ತಿರುವ ನೀನಿನ್ನು ಇಲ್ಲಿರಬಾರದು. ನಿನ್ನಂಥ ಸೋಮಾರಿಗಳಿಗೆ ಈ ಮನೆಯಲ್ಲಿ ಜಾಗವಿಲ್ಲ, ಹೊರಟುಹೋಗು ಇಲ್ಲಿಂದ” ಎಂದು ಕಠಿನವಾದ ಮಾತುಗಳಿಂದ ನಿಂದಿಸಿದ. 

ವಿಧಿಯಿಲ್ಲದೆ ಜೇಮ್ಸ್‌ ಮನೆಯಿಂದ ಹೊರಟ. ಕಾಲೆಳೆಯುತ್ತ ಮುಂದೆ ಹೋಗಿ ಒಂದು ಪಟ್ಟಣವನ್ನು ಸೇರಿದ. ಹಸಿವು, ಬಾಯಾರಿಕೆಗಳಿಂದ ಒಂದು ಹೆಜ್ಜೆ ಮುಂದಿಡಲೂ ಅವನಿಗೆ ಶಕ್ತಿಯಿರಲಿಲ್ಲ. ಏನಾದರೂ ಆಹಾರ ಕೊಡುವಂತೆ ಹಲವರನ್ನು ಕೇಳಿದ. ಯಾರೂ ಅವನಿಗೆ ಏನೂ ಕೊಡಲಿಲ್ಲ. “”ದೇಹ ನೋಡಿದರೆ ಕಲ್ಲಿನ ಹಾಗೆ ಇದೆ. ಗಟ್ಟಿಮುಟ್ಟಾಗಿದ್ದೀ. ನಾಚಿಕೆಯಾಗುವುದಿಲ್ಲವೆ ನಿನಗೆ? ಎಲ್ಲಾದರೂ ಕೆಲಸ ಮಾಡಿ ಸಂಪಾದನೆ ಮಾಡು” ಎಂದು ಹಿತೋಕ್ತಿ ಹೇಳಿದರು. ಯಾವ ಕೆಲಸವನ್ನು ಕೂಡ ಅರಿಯದ ಜೇಮ್ಸ್‌ ಬೇಡುತ್ತ ಮುಂದೆ ಹೋಗಿ ಒಂದು ಮನೆಯ ಮುಂದೆ ಜಾnನತಪ್ಪಿ$ ಬಿದ್ದುಕೊಂಡ. ಆ ಮನೆಯ ಒಡೆಯ ಒಬ್ಬ ವ್ಯಾಪಾರಿ. ಅವನು ಶೈತ್ಯೋಪಚಾರಗಳನ್ನು ಮಾಡಿ ಜೇಮ್ಸ್‌ ಎಚ್ಚರಗೊಳ್ಳುವಂತೆ ಮಾಡಿದ. ಬಳಿಕ ಅವನ ವಿಷಯಗಳನ್ನೆಲ್ಲ ಕೇಳಿ ತಿಳಿದುಕೊಂಡ.

    ವ್ಯಾಪಾರಿ ಕೂಡ ಧರ್ಮಾರ್ಥ ಊಟ ಕೊಡಲು ಒಪ್ಪಲಿಲ್ಲ. “”ಇದು ಪಟ್ಟಣ. ಇಲ್ಲಿ ಒಂದು ಕಡ್ಡಿಗೂ ಬೆಲೆಯಿದೆ. ನೀನು ನನ್ನ ಮನೆಯಲ್ಲಿ ಕೆಲಸ ಮಾಡುವುದಾದರೆ ಮಾತ್ರ ಈಗ ನಿನಗೆ ಆಹಾರ ಕೊಡುತ್ತೇನೆ. ಆಗುವುದಿಲ್ಲವೆಂದಾದರೆ ಮುಂದಿನ ದಾರಿ ನೋಡಿಕೋ” ಎಂದುಬಿಟ್ಟ. ವಿಧಿಯಿಲ್ಲದೆ ಜೇಮ್ಸ್‌ ಕೆಲಸ ಮಾಡಲು ಒಪ್ಪಿಕೊಂಡ. ಕೆಲಸದ ವಿಧಾನವೇ ತಿಳಿಯದೆ ಅವನು ಏನೋ ಒಂದು ಕೆಲಸ ಮಾಡಿ, “”ನನಗೆ ಊಟ ಕೊಡಿ” ಎಂದು ಕೇಳಿದ. ವ್ಯಾಪಾರಿ ಒಂದು ತಟ್ಟೆಯಲ್ಲಿ ಒಂದು ಹಿಡಿ ಅನ್ನ ಮತ್ತು ಸಂಬಳವೆಂದು ಒಂದು ಬಿಲ್ಲೆ ಮಾತ್ರ ತಂದು ಅವನ ಮುಂದಿಟ್ಟ. “”ಇದು ನಿನ್ನ ಶ್ರಮಕ್ಕೆ ತಕ್ಕದಾದಷ್ಟೇ ಆಹಾರ ಮತ್ತು ವೇತನ. ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಪಡೆಯಬಹುದು” ಎಂದು ಸ್ಪಷ್ಟವಾಗಿ ಹೇಳಿದ.

ಜೇಮ್ಸ್‌ ಆಹಾರ ತಿಂದು ವ್ಯಾಪಾರಿ ತೋರಿಸಿದ ಕೋಣೆಯಲ್ಲಿ ಮಲಗಿಕೊಂಡ. ಅಲ್ಲಿ ಹೇರಳವಾಗಿ ಇಲಿಗಳಿದ್ದವು. ಅವು ಅವನ ಮೇಲೇರಿ ಕಚ್ಚುವುದಕ್ಕೆ ಆರಂಭಿಸಿದವು. ಅವನು ಅವುಗಳನ್ನು ಓಡಿಸುತ್ತ ಬೆಳಗಿನ ವರೆಗೂ ಜಾಗರಣೆ ಮಾಡಿದ. ಬೆಳಗಾದ ಕೂಡಲೇ ಹೊರಗೆ ಹೋಗಿ ತನ್ನಲ್ಲಿರುವ ಬಿಲ್ಲೆಯನ್ನು ಕೊಟ್ಟು ಒಂದು ಬೆಕ್ಕನ್ನು ತಂದ. ಅಂದು ಕಷ್ಟಪಟ್ಟು ಕೆಲಸ ಮಾಡಿದ. ಅವನಿಗೂ ಬೆಕ್ಕಿಗೂ ಬೇಕಾದಷ್ಟು ಆಹಾರದೊಂದಿಗೆ ಎರಡು ಬಿಲ್ಲೆ ವೇತನವೂ ಅವನಿಗೆ ದೊರಕಿತು. ಹೊಟ್ಟೆ ತುಂಬ ಊಟ ಮಾಡಿ ಬೆಕ್ಕಿನೊಂದಿಗೆ ತನ್ನ ಕೋಣೆಯಲ್ಲಿ ಮಲಗಿಕೊಂಡ. ಮಲಗಿದ ಕೂಡಲೇ ಇಲಿಗಳು ಬಂದವು. ಆದರೆ ಬೆಕ್ಕು ಬಂದ ಇಲಿಗಳನ್ನೆಲ್ಲ ಹೊಡೆದುರುಳಿಸಿತು. ಜೇಮ್ಸ್‌ ನಿರ್ಯೋಚನೆಯಿಂದ ಬೆಳಗಿನ ವರೆಗೂ ನಿದ್ರಿಸಿದ.

Advertisement

    ಒಂದೆರಡು ದಿನ ಕಳೆಯಿತು. ವ್ಯಾಪಾರಿ ಹಡಗನ್ನೇರಿಕೊಂಡು ವಿದೇಶಕ್ಕೆ ಹೊರಡಲು ಸಿದ್ಧನಾದ. ತನ್ನ ಜೊತೆಗೆ ಜೇಮ್ಸ್‌ನನ್ನೂ ಕರೆದುಕೊಂಡ. ಹಡಗು ಹೋಗುತ್ತಿದ್ದಾಗ ಅವನು ತನ್ನೊಂದಿಗೆ ಬೆಕ್ಕನ್ನೂ ತಂದಿರುವುದನ್ನು ವ್ಯಾಪಾರಿ ನೋಡಿದ. “”ಅದನ್ನು ಹಡಗಿನೊಳಗೆ ಯಾಕೆ ಕರೆದು ತಂದೆ? ನನಗಿದು ಇಷ್ಟವಾಗುವುದಿಲ್ಲ. ಕೂಡಲೇ ಬೆಕ್ಕನ್ನು ಕಡಲಿಗೆ ಎಸೆದುಬಿಡು. ಇಲ್ಲವಾದರೆ ನಿನ್ನನ್ನೂ ಕೆಳಗೆ ಇಳಿಸಬೇಕಾಗುತ್ತದೆ” ಎಂದು ಎಚ್ಚರಿಸಿದ. ಜೇಮ್ಸ್‌ ಈ ಮಾತಿಗೆ ಒಪ್ಪಲಿಲ್ಲ. “”ಸಾಧುಪ್ರಾಣಿಯೊಂದನ್ನು ನೀರಿಗೆಸೆದು ಕೊಲ್ಲಲು ನನಗಿಷ್ಟವಿಲ್ಲ” ಎಂದು ಪಟ್ಟುಹಿಡಿದ. ವ್ಯಾಪಾರಿ ಅವನೊಂದಿಗೆ ಬೆಕ್ಕನ್ನು ಒಂದು ದ್ವೀಪದಲ್ಲಿ ಇಳಿಸಿ ಮುಂದೆ ಸಾಗಿದ.

    ಆ ದ್ವೀಪದಲ್ಲಿ ಜೇಮ್ಸ್‌ ಸಾಗುತ್ತ ಒಂದು ಅರಮನೆಯನ್ನು ತಲುಪಿದ. ಒಳಗೆ ರಾಜನು, ರಾಣಿಯೊಂದಿಗೆ ತುಂಬ ಚಿಂತೆಯಲ್ಲಿದ್ದ. ಅವರಿಬ್ಬರೂ ತುಂಬ ದಿನಗಳಿಂದ ಆಹಾರವಿಲ್ಲದೆ ಸೊರಗಿದ್ದರು. ಜೇಮ್ಸ್‌ ಅವರ ಚಿಂತೆಗೆ ಕಾರಣವೇನೆಂದು ವಿಚಾರಿಸಿದ. ಅವರು, “”ನಮ್ಮ ರಾಜ್ಯದಲ್ಲಿ ಸಾವಿರಾರು ಬಾಲವಿರುವ ಪ್ರಾಣಿಗಳು ತುಂಬಿಕೊಂಡಿವೆ. ಕಾಳು, ಕಡ್ಡಿಗಳನ್ನು ಅವು ತಿಂದು ಮುಗಿಸುತ್ತವೆ. ನಾವಾಗಲಿ, ಪ್ರಜೆಗಳಾಗಲಿ ಆಹಾರವನ್ನೇ ಕಾಣದೆ ವರ್ಷಗಳು ಸಂದುಹೋದವು. ಈಗ ಆಹಾರ ಸಿಗದೆ ಈ ಪ್ರಾಣಿಗಳು ಕಣ್ಣಿಗೆ ಕಂಡದ್ದನ್ನೆಲ್ಲ ಕತ್ತರಿಸಿ ಹಾಕುತ್ತಿವೆ” ಎಂದು ದುಃಖದಿಂದ ಹೇಳಿದರು.

    ಅಷ್ಟರಲ್ಲಿ ಬಾಲವಿರುವ ಪ್ರಾಣಿಗಳ ದಂಡು ಅಲ್ಲಿಗೆ ಬಂದಿತು. ಆಗ ಜೇಮ್ಸ್‌ ಕಂಕುಳಿನಲ್ಲಿಟ್ಟುಕೊಂಡಿದ್ದ ಬೆಕ್ಕು “ಮ್ಯಾಂವ್‌’ ಎನ್ನುತ್ತ ಅವುಗಳ ಮೇಲೆ ನೆಗೆಯಿತು. ಚೆನ್ನಾಗಿ ತಿಂದು ಕೊಬ್ಬಿದ್ದ ಈ ಪ್ರಾಣಿಗಳು ಇಲಿಗಳೆಂಬುದು ಜೇಮ್ಸ್‌ನಿಗೆ ತಿಳಿಯಿತು. ಅವನ ಬೆಕ್ಕು ನಾಲ್ಕಾರು ಇಲಿಗಳನ್ನು ಒಂದೇಟಿಗೇ ಉರುಳಿಸಿತು. ಅದನ್ನು ಕಂಡು ಉಳಿದವು ಕಾಲಿಗೆ ಬುದ್ಧಿ ಹೇಳಿದವು. ಕೆಲವು ದಿನಗಳಲ್ಲಿ ಬೆಕ್ಕು ರಾಜ್ಯವನ್ನು ಕಾಡುತ್ತಿದ್ದ ಇಲಿಗಳ ಸೇನೆಯನ್ನು ಹುಟ್ಟಡಗಿಸಿಬಿಟ್ಟಿತು.

    ರಾಜನು ಸಂತೋಷದಿಂದ ಜೇಮ್ಸ್‌ನನ್ನು ಅಪ್ಪಿಕೊಂಡ. “”ಮಹಾನುಭಾವಾ, ನೀನು ಈ ಪ್ರಾಣಿಗಳ ಕಾಟದಿಂದ ಸಾಯುತ್ತಿದ್ದ ನಮ್ಮನ್ನು ಕಾಪಾಡಿದೆ. ಪ್ರತಿಯಾಗಿ ನಿನಗೆ ಏನು ಬೇಕೋ ಕೋರಿಕೋ” ಎಂದು ಹೇಳಿದ. ಜೇಮ್ಸ್‌, “”ಇಷ್ಟವಿದೆಯಾದರೆ ನನ್ನನ್ನು ಈ ಪಟ್ಟಣದ ಅಧ್ಯಕ್ಷನಾಗಿ ಮಾಡಿಬಿಡಿ” ಎಂದು ಹೇಳಿದ. ರಾಜನಿಗೆ ನಗು ಬಂತು. “”ಪಟ್ಟಣದ ಅಧ್ಯಕ್ಷನಲ್ಲ, ಮುಂದೆ ಈ ರಾಜ್ಯಕ್ಕೆ ನಿನ್ನನ್ನೇ ರಾಜನಾಗಿ ಮಾಡುತ್ತೇನೆ. ನನ್ನ ಮಗಳನ್ನು ಮದುವೆಯಾಗಿ ಇಲ್ಲಿಯೇ ಇದ್ದುಕೋ” ಎಂದು ಹೇಳಿದ.

    ಜೇಮ್ಸ್‌ ರಾಜನ ಅಳಿಯನಾದ. ಊರಿನಿಂದ ತಂದೆಯನ್ನು ಅಲ್ಲಿಗೆ ಕರೆದುಕೊಂಡು ಬಂದ. ಮಗನ ಕನಸು ನಿಜವಾದುದು ನೋಡಿ ರೈತನೂ ಖುಷಿಪಟ್ಟು ಮಗನೊಂದಿಗೇ ನೆಲೆಸಿದ. ಸೌಭಾಗ್ಯ ತಂದ ಬೆಕ್ಕನ್ನು ಜೇಮ್ಸ್‌ ಪ್ರೀತಿಯಿಂದ ನೋಡಿಕೊಂಡ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next