ಎಜ್‌ಬಾಸ್ಟನ್: ಪ್ರವಾಸಿ ಭಾರತ ವಿರುದ್ಧ ಆ. 1ರಿಂದ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯಕ್ಕೆ 13 ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 2016ರ ಬಳಿಕ ಇದೇ ಮೊದಲ ಬಾರಿ ಅದಿಲ್ ರಶೀದ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಎಸೆಕ್ಸ್‌ನ ಸೀಮರ್ ಜೆಮೀ ಪೋರ್ಟರ್‌ಗಿದು ಚೊಚ್ಚಲ ಟೆಸ್ಟ್ ಪಂದ್ಯದ ಸಂಭ್ರಮವಾಗಿದೆ.
ರಶೀದ್ ಅವರ ಸೇರ್ಪಡೆ ಎಲ್ಲರಿಗೂ ಆಶ್ಚರ್ಯವಾಗಿದೆ. ಭಾರತ ವಿರುದ್ಧ ಈ ಹಿಂದೆ ಉತ್ತಮ ನಿರ್ವಹಣೆ ದಾಖಲಿಸಿದ್ದ ಮೊಯಿನ್ ಅಲಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. 2014ರಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಅವರು 23 ಸರಾಸರಿಯಂತೆ 19 ವಿಕೆಟ್ ಉರುಳಿಸಿದ್ದರು. ಇದು ಅವರ ಮೊದಲ ಟೆಸ್ಟ್ ಸರಣಿಯಾಗಿತ್ತು.
ಒಂದು ವೇಳೆ ರಶೀದ್ ಎಜ್‌ಬಾಸ್ಟನ್‌ನಲ್ಲಿ ಆಡಿದರೆ ಇಂಗ್ಲೆಂಡ್ ಅವಳಿ ಸ್ಪಿನ್ ದಾಳಿಯೊಂದಿಗೆ ಭಾರತವನ್ನು ಎದುರಿಸುವ ಸಾಧ್ಯತೆಯಿದೆ. ತವರಿನ ಟೆಸ್ಟ್‌ನಲ್ಲಿ ರಶೀದ್ ಆಡುತ್ತಿರುವುದು ಇದೇ ಮೊದಲ ಸಲವಾಗಿದೆ. ಈ ಹಿಂದೆ ಆಡಿದ 10 ಟೆಸ್ಟ್ ಪಂದ್ಯಗಳು ವಿದೇಶಿ ನೆಲದಲ್ಲಿ ಆಗಿದೆ. 2015-16ರಲ್ಲಿ ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ ಅವರು ಟೆಸ್ಟ್‌ಗೆ ಪಾದಾರ್ಪಣೆಗೈದಿದ್ದರು.
ಕಳೆದ ಫೆಬ್ರವರಿಯಲ್ಲಿ ಯಾರ್ಕ್‌ಶೈರ್ ಜತೆ ಏಕದಿನ ಕ್ರಿಕೆಟ್ ಆಡಲು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ರಶೀದ್ ಟೆಸ್ಟ್ ಕ್ರಿಕೆಟ್ ಆಡದಿದ್ದರೂ ಅವರ ಸಾಮರ್ಥ್ಯ, ವೈಟ್ ಬಾಲ್ ಫಾರ್ಮ್ನ ಆಧಾರದಲ್ಲಿ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದೆ ಎಂದು ನೂತನ ರಾಷ್ಟ್ರೀಯ ಆಯ್ಕೆಗಾರ ಎಡ್ ಸ್ಮಿತ್ ಹೇಳಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪಾಕಿಸ್ಥಾನ ಸರಣಿಗೆ ಜೋಸ್ ಬಟ್ಲರ್ ಅವರನ್ನು ಇದೇ ರೀತಿ ಆಯ್ಕೆ ಮಾಡಿ ತಂಡ ಯಶಸ್ಸು ಸಾಧಿಸಿತ್ತು.
ಇಂಗ್ಲೆಂಡ್ ತಂಡ
ಜೋ ರೂಟ್ (ನಾಯಕ), ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಜಾನಿ ಬೇರ್‌ಸ್ಟೊ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲಸ್ಟೇರ್ ಕುಕ್, ಸ್ಯಾಮ್ ಕ್ಯುರಾನ್, ಕೀಟನ್ ಜೆನ್ನಿಂಗ್ಸ್, ಡೇವಿಡ್ ಮಾಲನ್, ಜೆಮೀ ಪೋರ್ಟರ್, ಅದಿಲ್ ರಶೀದ್, ಬೆನ್ ಸ್ಟೋಕ್ಸ್