Advertisement

England-South Africa; ಆಘಾತಕಾರಿ ಸೋಲುಂಡ ತಂಡಗಳಿಗೆ ಅಗ್ನಿಪರೀಕ್ಷೆ

11:11 PM Oct 20, 2023 | Team Udayavani |

ಮುಂಬಯಿ: ತಮ್ಮ ಹಿಂದಿನ ಪಂದ್ಯಗಳಲ್ಲಿ ಆಘಾತಕಾರಿ ಸೋಲನುಭವಿಸಿದ “ಬಲಿಷ್ಠ’ ತಂಡಗಳೆರಡು ಶನಿವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಅಗ್ನಿಪರೀಕ್ಷೆಗೆ ಇಳಿಯಲಿವೆ. ಈ ತಂಡಗಳೆಂದರೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಈ ಬಾರಿ ಚಿಗುರಿದಂತಿರುವ ದಕ್ಷಿಣ ಆಫ್ರಿಕಾ. ಈ ಮಹತ್ವದ ಪಂದ್ಯದೊಂದಿಗೆ ಮುಂಬಯಿ ಮಹಾನಗರಿ 13ನೇ ವಿಶ್ವಕಪ್‌ಗೆ ತೆರೆಯಲ್ಪಡಲಿದೆ.

Advertisement

ಎರಡೂ ತಂಡಗಳು ತಲಾ 3 ಪಂದ್ಯಗಳನ್ನಾಡಿವೆ. ದಕ್ಷಿಣ ಆಫ್ರಿಕಾ ಎರಡನ್ನು ಗೆದ್ದರೆ, ಇಂಗ್ಲೆಂಡ್‌ಗೆ ಒಲಿದದ್ದು ಒಂದು ಗೆಲುವು ಮಾತ್ರ. ಹೀಗಾಗಿ ಆಂಗ್ಲರ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯವನ್ನೂ ಸೋತರೆ ಜಾಸ್‌ ಬಟ್ಲರ್‌ ಬಳಗದ ಹಾದಿ ಖಂಡಿತ ದುರ್ಗಮಗೊಳ್ಳಲಿದೆ.

ವಿಶ್ವಕಪ್‌ ಇತಿಹಾಸದ “ಚೋಕರ್’ ಎಂದೇ ಜನಜನಿತವಾಗಿರುವ ದಕ್ಷಿಣ ಆಫ್ರಿಕಾ ಈ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಎಲ್ಲಿಯ ತನಕವೆಂದರೆ, ನೆದರ್ಲೆಂಡ್ಸ್‌ ಎದುರಿನ ಧರ್ಮಶಾಲಾ ಪಂದ್ಯವನ್ನು ಸೋಲುವ ತನಕ! ಮಳೆಪೀಡಿತ ಈ 43 ಓವರ್‌ಗಳ ಪಂದ್ಯವನ್ನು ಟೆಂಬ ಬವುಮ ಟೀಮ್‌ 38 ರನ್ನುಗಳಿಂದ ಕಳೆದುಕೊಂಡಿತ್ತು. ಡಚ್‌ ಪಡೆಯ ಕಪ್ತಾನ ಸ್ಕಾಟ್‌ ಎಡ್ವರ್ಡ್ಸ್‌ ಮತ್ತು ಬೌಲರ್ ಸೇರಿಕೊಂಡು ಹರಿಣಗಳನ್ನು ಬೇಟೆಯಾಡಿದ್ದರು. 246 ರನ್‌ ಗುರಿ ಪಡೆದ ದಕ್ಷಿಣ ಆಫ್ರಿಕಾ 207ಕ್ಕೆ ಸರ್ವಪತನ ಕಂಡಿತ್ತು.

ಇದೇ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಎದುರಿನ ಆರಂಭಿಕ ಪಂದ್ಯದಲ್ಲಿ 5ಕ್ಕೆ 428 ರನ್‌ ಪೇರಿಸಿ ವಿಶ್ವಕಪ್‌ ದಾಖಲೆ ಸ್ಥಾಪಿಸಿತ್ತು. ಬಳಿಕ ಆಸ್ಟ್ರೇಲಿಯ ವಿರುದ್ಧ ಮುನ್ನೂರರ ಗಡಿ ದಾಟಿ 134 ರನ್ನುಗಳ ಅಮೋಘ ಜಯ ಸಾಧಿಸಿತ್ತು. ಆದರೆ ಸಾಮಾನ್ಯ ತಂಡವಾದ ನೆದರ್ಲೆಂಡ್ಸ್‌ ವಿರುದ್ಧ ನೆಲಕಚ್ಚಿತು. ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದಕ್ಕೆ ದಕ್ಷಿಣ ಆಫ್ರಿಕಾ ಒಂದು ಉತ್ತಮ ಉದಾಹರಣೆ.

ಜೋಶ್‌ ತೋರದ ಇಂಗ್ಲೆಂಡ್‌
ಹಾಗೆಯೇ ಇಂಗ್ಲೆಂಡ್‌. ಸಾಮಾನ್ಯವಾಗಿ ಹಾಲಿ ಚಾಂಪಿ ಯನ್ಸ್‌ ಹಿಂದಿನ ಕೂಟದ ಜೋಶ್‌ ಕಾಯ್ದುಕೊಳ್ಳು ವುದಿಲ್ಲ ಎಂಬ ಮಾತಿದೆ. ನ್ಯೂಜಿಲ್ಯಾಂಡ್‌ ವಿರುದ್ಧದ ಉದ್ಘಾಟನ ಪಂದ್ಯದಲ್ಲೇ ಇಂಗ್ಲೆಂಡ್‌ ಇದನ್ನು ಸಾಬೀತುಪಡಿಸ ತೊಡಗಿತು. ಬಳಿಕ ಬಾಂಗ್ಲಾದೇಶವನ್ನು 137 ರನ್ನುಗಳಿಂದ ಸೋಲಿಸಿತು. ಆದರೆ ಅಫ್ಘಾನಿಸ್ಥಾನದ ವಿರುದ್ಧ ಮುಗ್ಗರಿಸಿ ತೀವ್ರ ಮುಖಭಂಗ ಅನುಭವಿಸಿತು. ಹೊಸದಿಲ್ಲಿಯ ಈ ಮೇಲಾಟದಲ್ಲಿ 286 ರನ್‌ ಮಾಡಬೇಕಿದ್ದ ಇಂಗ್ಲೆಂಡ್‌ 215ಕ್ಕೆ ತನ್ನ ಹೋರಾಟವನ್ನು ಕೈಬಿಟ್ಟಿತ್ತು. ಹೀಗಾಗಿ ಎರಡೂ ತಂಡಗಳೀಗ ಆಘಾತಕಾರಿ ಹಾಗೂ ಅನಿರೀಕ್ಷಿತ ಸೋಲಿನಿಂದ ಮೇಲೆದ್ದು ಬರಬೇಕಿದೆ.

Advertisement

ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿವೆ. ಇದನ್ನು ಸಾಬೀತುಪಡಿಸುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದು ದಕ್ಷಿಣ ಆಫ್ರಿಕಾ. ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಸತತ 2 ಶತಕ ಬಾರಿಸಿ ಪ್ರಚಂಡ ಫಾರ್ಮ್ ತೆರೆದಿರಿಸಿದ್ದರು. ರಸ್ಸಿ ವಾನ್‌ ಡರ್‌ ಡುಸೆನ್‌, ಐಡನ್‌ ಮಾರ್ಕ್‌ರಮ್‌ ಕೂಡ ಬ್ಯಾಟಿಂಗ್‌ ಜೋಶ್‌ ತೋರಿದ್ದರು. ಬವುಮ, ಕ್ಲಾಸೆನ್‌, ಮಿಲ್ಲರ್‌ ಅವರನ್ನೊಳಗೊಂಡ ಹರಿಣಗಳ ಬ್ಯಾಟಿಂಗ್‌ ಲೈನ್‌ಅಪ್‌ ವೈವಿಧ್ಯಮಯ. ಬೌಲಿಂಗ್‌ ವಿಭಾಗವೂ ಕ್ಲಾಸ್‌ ಮಟ್ಟದ್ದು. ರಬಾಡ, ಎನ್‌ಗಿಡಿ, ಕ್ಲಾಸೆನ್‌, ಮಹಾರಾಜ್‌, ಶಮ್ಸಿ ಇಲ್ಲಿನ ಅಪಾಯಕಾರಿ ಅಸ್ತ್ರಗಳು.

ಬೆನ್‌ ಸ್ಟೋಕ್ಸ್‌ ನಿರೀಕ್ಷೆಯಲ್ಲಿ…
ಸಾಮರ್ಥ್ಯದ ವಿಷಯದಲ್ಲಿ ಎರಡೂ ಸಮಬಲದ ತಂಡಗಳು. ಆದರೆ ಬೆನ್‌ ಸ್ಟೋಕ್ಸ್‌ ಗೈರು ಇಂಗ್ಲೆಂಡನ್ನು ಬಲವಾಗಿ ಕಾಡುತ್ತಿದೆ. ಈ ಆಲ್‌ರೌಂಡರ್‌ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಆಗ ಇಂಗ್ಲೆಂಡ್‌ ಹೆಚ್ಚು ಶಕ್ತಿಶಾಲಿಯಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.

ಆದರೆ ಬಟ್ಲರ್‌, ಲಿವಿಂಗ್‌ಸ್ಟೋನ್‌ ಅವರ ಫಾರ್ಮ್ ಕೈಕೊಟ್ಟಿದೆ. ಬಟ್ಲರ್‌ 3 ಪಂದ್ಯಗಳಿಂದ ಗಳಿಸಿದ್ದು 43, 20 ಮತ್ತು 9 ರನ್‌ ಮಾತ್ರ. ಹಾಗೆಯೇ ಲಿವಿಂಗ್‌ಸ್ಟೋನ್‌ ಗಳಿಕೆ ಕೇವಲ 20, 0, 10 ರನ್‌. ಸ್ಟೋಕ್ಸ್‌ ಬರುವುದಾದರೆ ಲಿವಿಂಗ್‌ಸ್ಟೋನ್‌ ಜಾಗ ಬಿಡಬೇಕಾದೀತು. ಸದ್ಯ ಇಂಗ್ಲೆಂಡ್‌ ಬ್ಯಾಟಿಂಗ್‌ ಸರದಿಯಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿರುವುದು ರೂಟ್‌ ಮತ್ತು ಮಲಾನ್‌ ಮಾತ್ರ.

ಇಂಗ್ಲೆಂಡ್‌ ಬೌಲಿಂಗ್‌ ಸರದಿ ಕೂಡ ದೌರ್ಬಲ್ಯವನ್ನು ತೆರೆದಿರಿಸಿದೆ. ರೀಸ್‌ ಟಾಪ್‌ಲೀ (5 ವಿಕೆಟ್‌), ಆದಿಲ್‌ ರಶೀದ್‌ (4 ವಿಕೆಟ್‌) ಹೊರತುಪಡಿಸಿದರೆ ಉಳಿದವರ್ಯಾರೂ ಪರಿಣಾಮ ಬೀರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next