ಕೇಪ್ ಟೌನ್: ಮಧ್ಯಮ ವೇಗಿ ಅಯಬೊಂಗಾ ಖಾಕಾ ಅವರ ಮಿಂಚಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವನ್ನು 6 ರನ್ನುಗಳಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಸಲ ವನಿತಾ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆ ಹಾಕಿದೆ. ರವಿವಾರದ ಪ್ರಶಸ್ತಿ ಸಮರದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ 4 ವಿಕೆಟಿಗೆ 164 ರನ್ ಪೇರಿಸಿದರೆ, ಇಂಗ್ಲೆಂಡ್ 8 ವಿಕೆಟಿಗೆ 158 ರನ್ ಮಾಡಿ ಕೂಟದಿಂದ ನಿರ್ಗಮಿಸಿತು.
ಇಂಗ್ಲೆಂಡ್ ಚೇಸಿಂಗ್ ಬಿರುಸಿನಿಂದಲೇ ಕೂಡಿತ್ತು. ಡೇನಿಯಲ್ ವ್ಯಾಟ್ (34) ಮತ್ತು ಸೋಫಿಯಾ ಡಂಕ್ಲಿ (28) ಹತ್ತರ ಸರಾಸರಿಯಲ್ಲಿ ರನ್ ಪೇರಿಸತೊಡಗಿದರು. 5.1 ಓವರ್‌ಗಳಿಂದ 53 ರನ್ ಒಟ್ಟುಗೂಡಿತು. ಈ ಹಂತದಲ್ಲಿ ಶಬಿ°ಮ್ ಇಸ್ಮಾಯಿಲ್ ಒಂದೇ ಓವರ್‌ನಲ್ಲಿ ಓವಳಿ ಆಘಾತವಿಕ್ಕಿದರು. ಡಂಕ್ಲಿ ಮತ್ತು ಅಲೈಸ್ ಕ್ಯಾಪ್ಸಿ (0) ವಿಕೆಟ್ ಹಾರಿಸಿದರು. ವ್ಯಾಟ್-ನಥಾಲಿ ಸ್ಕಿವರ್ 32 ರನ್ ಜತೆಯಾಟ ದಾಖಲಿಸಿದರು. ಆದರೆ ಬಲಗೈ ಮಧ್ಯಮ ವೇಗಿ ಅಯಬೊಂಗಾ ಖಾಕಾ ಪಂದ್ಯದ 18ನೇ ಓವರ್‌ನಲ್ಲಿ 3 ವಿಕೆಟ್ ಉಡಾಯಿಸಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಅವರ ಸಾಧನೆ 29ಕ್ಕೆ 4 ವಿಕೆಟ್. ಶಬಿ°ಮ್ ಇಸ್ಮಾಯಿಲ್ 3 ವಿಕೆಟ್ ಉರುಳಿಸಿದರು.
ಆ. ಆಫ್ರಿಕಾ ಆಬ್ಬರದ ಆರಂಭ
ಲಾರಾ ವೋಲ್ವಾರ್ಟ್ ಮತ್ತು ಟಾಜ್ಮಿನ್ ಬ್ರಿಟ್ಸ್ ಇಂಗ್ಲೆಂಡ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಅಬ್ಬರದ ಆರಂಭ ಒದಗಿಸಿದರು. 13.4 ಓವರ್‌ಗಳಲ್ಲಿ 96 ರನ್ ಒಟ್ಟುಗೂಡಿತು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ವನ್‌ಡೌನ್ ಆಟಗಾರ್ತಿ ಮರಿಜಾನ್ ಕಾಪ್ ಕೂಡ ಬಿರುಸಿನ ಆಟಕ್ಕಿಳಿದರು.
Related Articles
ಟಾಜ್ಮಿನ್ ಬ್ರಿಟ್ಸ್ 55 ಎಸೆತ ಎದುರಿಸಿ ಸರ್ವಾಧಿಕ 68 ರನ್ ಹೊಡೆದರು. ಸಿಡಿಸಿದ್ದು 6 ಬೌಂಡರಿ ಹಾಗೂ 2 ಸಿಕ್ಸರ್. ಲಾರಾ ವೋಲ್ವಾರ್ಟ್ 44 ಎಸೆತ ಎದುರಿಸಿ 53 ರನ್ ಬಾರಿಸಿದರು (5 ಬೌಂಡರಿ, 1 ಸಿಕ್ಸರ್). ಮರಿಜಾನ್ ಕಾಪ್ ಅವರ ಅಜೇಯ 27 ರನ್ ಕೇವಲ 13 ಎಸೆತಗಳಿಂದ ಬಂತು (4 ಬೌಂಡರಿ).
ಬಾಂಗ್ಲಾವನ್ನು 10 ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್ ಅರ್ಹತೆ ಪಡೆದಿದ್ದ ದಕ್ಷಿಣ ಆಫ್ರಿಕಾ ಇಲ್ಲಿಯೂ ಅದೇ ಜೋಶ್‌ನಲ್ಲಿತ್ತು. ಅಲ್ಲಿಯೂ ಈ ಆರಂಭಿಕರು ಅರ್ಧ ಶತಕ ಬಾರಿಸಿದ್ದರು.
ಇಂಗ್ಲೆಂಡ್ ಪರ ಸೋಫಿ 22 ರನ್ನಿತ್ತು 3 ವಿಕೆಟ್ ಕಿತ್ತರು. ಕ್ಲೋ ಟ್ರಯಾನ್ (3) ಮತ್ತು ನಾಡಿನ್ ಡಿ ಕ್ಲರ್ಕ್ (3) ಅವರನ್ನು ಒಂದೇ ಓವರ್‌ನಲ್ಲಿ ಕೆಡವಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-4 ವಿಕೆಟಿಗೆ 164 (ಬ್ರಿಟ್ಸ್ 68, ವೋಲ್ವಾರ್ಟ್ 53, ಕಾಪ್ ಔಟಾಗದೆ 27, ಎಕ್‌ಸ್ಟೋನ್ 22ಕ್ಕೆ 3). ಇಂಗ್ಲೆಂಡ್-8 ವಿಕೆಟಿಗೆ 158 (ಸ್ಕಿವರ್ 40, ವ್ಯಾಟ್ 34, ನೈಟ್ 31, ಡಂಕ್ಲಿ 28, ಖಾಕಾ 29ಕ್ಕೆ 4, ಶಬಿ°ಮ್ 27ಕ್ಕೆ 3).