ಆಮ್‌ಸ್ಟೆಲ್‌ವೀನ್: ನೆದರ್‌ಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 498-4 ರನ್ ಗಳಿಸುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಗಳಿಸಿದ ತನ್ನದೇ ದಾಖಲೆಯನ್ನು ಮುರಿದಿದೆ.
ಈ ಮೊತ್ತವು ಜೂನ್ 2018 ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಮಾಡಿದ 481-6 ದಾಖಲೆಯನ್ನು ಮುರಿದಿದೆ.
ಜೋಸ್ ಬಟ್ಲರ್, ಡೇವಿಡ್ ಮಲಾನ್ ಮತ್ತು ಫಿಲ್ ಸಾಲ್ಟ್ ಅವರು ಆಮ್‌ಸ್ಟೆಲ್‌ವೀನ್ ನಲ್ಲಿ ಶತಕಗಳನ್ನು ಬಾರಿಸಿದರು.
ಬಟ್ಲರ್ 47 ಎಸೆತಗಳಲ್ಲಿ ಇಂಗ್ಲೆಂಡ್‌ನ ಎರಡನೇ ವೇಗದ ಶತಕ ದಾಖಲಿಸಿದರು. ತಂಡದ 26 ಸಿಕ್ಸರ್‌ಗಳಲ್ಲಿ 14 ಸಿಕ್ಸರ್‌ಗಳನ್ನು ಅವರೊಬ್ಬರೇ ಚಚ್ಚಿದ್ದು, ಔಟಾಗದೆ 162 ರನ್ ಗಳಿಸಿದ್ದರು. ಬಟ್ಲರ್ ಈಗ ರಾಷ್ಟ್ರೀಯ ತಂಡಕ್ಕಾಗಿ ಮೂರು ವೇಗದ ಏಕದಿನ ಶತಕಗಳನ್ನು ಹೊಂದಿದ್ದು, 46 ಎಸೆತಗಳು, 47 ಎಸೆತಗಳು ಮತ್ತು 50 ಎಸೆತಗಳಲ್ಲಿ ಈ ಸ್ಪೋಟಕ ಶತಕಗಳು ಬಂದಿವೆ.
ಸಾಲ್ಟ್ 93 ಎಸೆತಗಳಲ್ಲಿ 122 ಮತ್ತು ಮಲಾನ್ 109 ಎಸೆತಗಳಲ್ಲಿ 125 ರನ್ ಗಳಿಸಿದರೆ, ಲಿಯಾಮ್ ಲಿವಿಂಗ್‌ಸ್ಟೋನ್ 22 ಎಸೆತಗಳಲ್ಲಿ 66 ರನ್ ಗಳಿಸಿ ಔಟಾಗದೆ ಉಳಿದರು.
ನೆದರ್ಲ್ಯಾಂಡ್ಸ್ ಕ್ರಿಕೆಟ್ ವಿಶ್ವಕಪ್‌ನ ಹೊರಗೆ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡುತ್ತಿದ್ದು, ಪ್ರವಾಸಿಗರಿಂದ ದೊಡ್ಡ ಹೊಡೆತಗಳ ಸುರಿಮಳೆಗೆ ನಲುಗಿದೆ. ಮೈದಾನದ ಹೊರಗೆ ಹಲವಾರು ಚೆಂಡುಗಳು ಕಳೆದು ಹೋದ ಬಗ್ಗೆ ಬರದಿಯಾಗಿದೆ.
ಶೇನ್ ಸ್ನೇಟರ್ ಅವರ ಸೋದರ ಸಂಬಂಧಿ ಜೇಸನ್ ರಾಯ್ ಅವರನ್ನು ಬೌಲ್ಡ್ ಮಾಡಿ ಇಂಗ್ಲೆಂಡ್ 1 ರನ್ ಗೆ ಮೊದಲ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಪೀಟರ್ ಸೀಲಾರ್ ಸತತ ಎಸೆತಗಳಲ್ಲಿ ನಾಯಕ ಇಯಾನ್ ಮೋರ್ಗನ್ ಗೋಲ್ಡನ್ ಡಕ್‌ಗೆ ಅವರ ಎರಡು ವಿಕೆಟ್ ಪಡೆದರು.