ಸೌತಾಂಪ್ಟನ್: ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ಮತ್ತು ಶಾನನ್ ಗ್ಯಾಬ್ರಿಯಲ್ ಅವರ ದಾಳಿಗೆ ಹೆದರಿದ ಇಂಗ್ಲೆಂಡ್ ಸೌತಾಂಪ್ಟನ್ ಟೆಸ್ಟ್ ಪಂದ್ಯದ ದ್ವಿತೀಯ ದಿನ 204ಕ್ಕೆ ಕುಸಿದಿದೆ. ಹೋಲ್ಡರ್ 42 ರನ್ನಿಗೆ 6 ವಿಕೆಟ್ ಹಾರಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.
ಮಳೆಯಿಂದ ಮೊದಲ ದಿನ ಕೇವಲ 17.4 ಓವರ್‌ಗಳ ಆಟ ಸಾಧ್ಯವಾಗಿತ್ತು. ಇಂಗ್ಲೆಂಡ್ 35 ರನ್ನಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ಗುರುವಾರ ಮಳೆ ಇರಲಿಲ್ಲ. ಆದರೆ ವಿಂಡೀಸ್ ಬೌಲರ್‌ಗಳು ಬಿರುಗಾಳಿಯಾದರು. ಆರಂಭದಲ್ಲಿ ಶಾನನ್ ಗ್ಯಾಬ್ರಿಯಲ್ ಆತಿಥೇಯರಿಗೆ ಕಂಟಕವಾದರು. ಲಂಚ್ ವೇಳೆ ಇಂಗ್ಲೆಂಡ್ 106ಕ್ಕೆ 5 ವಿಕೆಟ್ ಉರುಳಿಸಿಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತು.
ಗ್ಯಾಬ್ರಿಯಲ್ ನಾಟೌಟ್ ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್ (30) ಮತ್ತು ಜೋ ಡೆನ್ಲಿ (18) ವಿಕೆಟ್ ಕಿತ್ತರು. ಜಾಕ್ ಕ್ರಾಲಿ (10) ಮತ್ತು ಓಲೀ ಪೋಪ್ (12) ವಿಕೆಟ್ ಹೋಲ್ಡರ್ ಪಾಲಾಯಿತು. ಇಂಗ್ಲೆಂಡ್ ಪರ ನಾಯಕ ಸ್ಟೋಕ್ಸ್ ಸರ್ವಾಧಿಕ 43 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-204 (ಸ್ಟೋಕ್ಸ್ 43, ಬಟ್ಲರ್ 35, ಬೆಸ್ ಔಟಾಗದೆ 31, ಬರ್ನ್ಸ್ 30, ಹೋಲ್ಡರ್ 42ಕ್ಕೆ 6, ಗ್ಯಾಬ್ರಿಯಲ್ 62ಕ್ಕೆ 4).