Advertisement
ಗುರುವಾರ ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್ ಓವಲ್’ನಲ್ಲಿ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಇಂಗ್ಲೆಂಡ್ 186 ರನ್ನುಗಳ ಬೃಹತ್ ಅಂತರದಿಂದ ಗೆದ್ದಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ಇಂಗ್ಲೆಂಡ್ ಸರಿಯಾಗಿ 50 ಓವರ್‌ಗಳಲ್ಲಿ 328 ರನ್ನಿಗೆ ಆಲೌಟ್ ಆದರೆ, ವೆಸ್ಟ್ ಇಂಡೀಸ್ 39.2 ಓವರ್‌ಗಳಲ್ಲಿ ಕೇವಲ 142 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
Related Articles
ಇಂಗ್ಲೆಂಡಿನ ಬೃಹತ್ ಮೊತ್ತಕ್ಕೆ ಕಾರಣವಾದದ್ದು ಆರಂಭಕಾರ ಅಲೆಕ್ಸ್ ಹೇಲ್ಸ್, ವನ್‌ಡೌನ್ ಬ್ಯಾಟ್ಸ್ ಮನ್ ಜೋ ರೂಟ್ ಅವರ ಆಕರ್ಷಕ ಸೆಂಚುರಿ; ಇವರಿಬ್ಬರ ನಡುವಿನ 192 ರನ್ ಜತೆಯಾಟ. ಹೇಲ್ಸ್ 107 ಎಸೆತಗಳಿಂದ 110 ರನ್ ಬಾರಿಸಿ 5ನೇ ಶತಕದ ಸಂಭ್ರಮವನ್ನಾಚರಿಸಿದರು. ಅವರ ಈ ಸ್ಫೋಟಕ ಆಟದಲ್ಲಿ 5 ಸಿಕ್ಸರ್, 9 ಬೌಂಡರಿ ಸೇರಿತ್ತು. ಮೊದಲು ಶತಕ ಪೂರೈಸಿದ ರೂಟ್ 108 ಎಸೆತಗಳಿಂದ 101 ರನ್ ಬಾರಿಸಿದರು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು. ರೂಟ್ ಪಾಲಿಗೆ ಇದು 9ನೇ ಶತಕ ಸಾಧನೆ. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 4, ನಾಯಕ ಜಾಸನ್ ಹೋಲ್ಡರ್ 3 ವಿಕೆಟ್ ಕಿತ್ತರು.
Advertisement
ದೊಡ್ಡ ಮೊತ್ತವನ್ನು ಕಂಡೇ ದಿಗಿಲುಗೊಂಡಂತೆ ಆಡಿದ ವೆಸ್ಟ್ ಇಂಡೀಸ್ 13 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ಕುಸಿತಕ್ಕೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಾಗಲಿಲ್ಲ. 46 ರನ್ ಮಾಡಿದ ಜೊನಾಥನ್ ಕಾರ್ಟರ್ ಅವರದೇ ಹೆಚ್ಚಿನ ಗಳಿಕೆ.
ಇಂಗ್ಲೆಂಡ್ ಪರ ವೋಕ್ಸ್, ಪ್ಲಂಕೆಟ್ ತಲಾ 3 ವಿಕೆಟ್, ಫಿನ್ 2 ವಿಕೆಟ್ ಹಾರಿಸಿದರು.
ಸಂಕ್ಷಿಪ್ತ ಸ್ಕೋರ್ ಇಂಗ್ಲೆಂಡ್-50 ಓವರ್‌ಗಳಲ್ಲಿ 328 (ಹೇಲ್ಸ್ 110, ರೂಟ್ 101, ಸ್ಟೋಕ್ಸ್ 34, ಜೋಸೆಫ್ 76ಕ್ಕೆ 4, ಹೋಲ್ಡರ್ 41ಕ್ಕೆ 3). ವೆಸ್ಟ್ ಇಂಡೀಸ್-39.2 ಓವರ್‌ಗಳಲ್ಲಿ 142 (ಕಾರ್ಟರ್ 46, ಜೋಸೆಫ್ ಔಟಾಗದೆ 22, ವೋಕ್ಸ್ 16ಕ್ಕೆ 3, ಪ್ಲಂಕೆಟ್ 27ಕ್ಕೆ 3, ಫಿನ್ 35ಕ್ಕೆ 2). ಪಂದ್ಯಶ್ರೇಷ್ಠ: ಅಲೆಕ್ಸ್ ಹೇಲ್ಸ್, ಸರಣಿಶ್ರೇಷ್ಠ: ಕ್ರಿಸ್ ವೋಕ್ಸ್.