ಮ್ಯಾಂಚೆಸ್ಟರ್: ಮಳೆಯಿಂದಾಗಿ 29 ಓವರ್‌ಗಳಿಗೆ ಸೀಮಿತಗೊಂಡ ದ್ವಿತೀಯ ಏಕದಿನ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾವನ್ನು 83 ರನ್ನಿಗೆ ಉಡಾಯಿಸಿದ ಇಂಗ್ಲೆಂಡ್ 118 ರನ್ನುಗಳ ಬೃಹತ್ ಜಯ ದಾಖಲಿಸಿದೆ.
ಇದರೊಂದಿಗೆ ಮೊದಲ ಪಂದ್ಯದಲ್ಲಿ ಅನುಭವಿಸಿದ 62 ರನ್ನುಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 28.1 ಓವರ್‌ಗಳಲ್ಲಿ 201ಕ್ಕೆ ಆಲೌಟ್ ಆಯಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 20.4 ಓವರ್‌ಗಳಲ್ಲಿ 83 ರನ್ನಿಗೆ ಕುಸಿಯಿತು.
ದಕ್ಷಿಣ ಆಫ್ರಿಕಾದ 4 ವಿಕೆಟ್ 6 ರನ್ ಆಗುವಷ್ಟರಲ್ಲಿ ಹಾರಿ ಹೋಗಿತ್ತು. ಇವರಲ್ಲಿ ಮೂವರು ಖಾತೆಯನ್ನೇ ತೆರೆದಿರಲಿಲ್ಲ. ಸೊನ್ನೆ ಸುತ್ತಿದವರೆಂದರೆ ಮಲಾನ್, ಡುಸೆನ್ ಮತ್ತುಮಾರ್ಕ್‌ರಮ್. ಇವರಲ್ಲಿ ಡುಸೆನ್ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು.
ವೇಗಿ ರೀಸ್ ಟಾಪ್ಲಿ ಹರಿಣಗಳ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿ 2 ವಿಕೆಟ್ ಕಿತ್ತರು. ಮೊಯಿನ್ ಅಲಿ ಕೂಡ 2 ವಿಕೆಟ್ ಉರುಳಿಸಿದರು. 29ಕ್ಕೆ 3 ವಿಕೆಟ್ ಕೆಡವಿದ ಆದಿಲ್ ರಶೀದ್ ಇಂಗ್ಲೆಂಡಿನ ಯಶಸ್ವಿ ಬೌಲರ್.
ಆಕ್ರಮಣಕಾರಿ ಆಟದ ಮೂಲಕ 35 ರನ್ ಬಾರಿಸಿ, ಬಳಿಕ ಅಪಾಯಕಾರಿ ಡೇವಿಡ್ ಮಿಲ್ಲರ್ ಅವರ ವಿಕೆಟ್ ಸಂಪಾದಿಸಿದ ಸ್ಯಾಮ್ ಕರನ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್-28.1 ಓವರ್‌ಗಳಲ್ಲಿ 201 (ಲಿವಿಂಗ್‌ಸ್ಟೋನ್ 38, ಕರನ್ 35, ಬೇರ್‌ಸ್ಟೊ 28, ಪ್ರಿಟೋರಿಯಸ್ 36ಕ್ಕೆ 4, ಶಮಿÕ 39ಕ್ಕೆ 2, ನೋರ್ಜೆ 53ಕ್ಕೆ 2). ದಕ್ಷಿಣ ಆಫ್ರಿಕಾ-20.4 ಓವರ್‌ಗಳಲ್ಲಿ 83 (ಕ್ಲಾಸೆನ್ 33, ಪ್ರಿಟೋರಿಯಸ್ 17, ಮಿಲ್ಲರ್ 12, ರಶೀದ್ 29ಕ್ಕೆ 3, ಟಾಪ್ಲಿ 17ಕ್ಕೆ 2, ಅಲಿ 22ಕ್ಕೆ 2).
ಪಂದ್ಯಶ್ರೇಷ್ಠ: ಸ್ಯಾಮ್ ಕರನ್.