ಗ್ರೆನೆಡಾ (ವೆಸ್ಟ್ ಇಂಡೀಸ್): ಪ್ರವಾಸಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯ ಭರ್ಜರಿ ಬ್ಯಾಟಿಂಗ್ ಮೇಲಾಟಕ್ಕೆ ಸಾಕ್ಷಿಯಾಯಿತು. ಬೌಂಡರಿ, ಸಿಕ್ಸರ್ ಗಳ ಸುರಿಮಳೆಯನ್ನೇ ಕಂಡ ಗ್ರೆನೆಡಾ ಪಂದ್ಯದಲ್ಲಿ ಅಂತಿಮವಾಗಿ ಇಂಗ್ಲೆಂಡ್ 29 ರನ್ ಗಳ ಅಂತರದಿಂದ ವಿಜಯಿಯಾಯಿತು.
ಇಲ್ಲಿನ ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಏಕದಿನ ಪಂದ್ಯದಲ್ಲಿ ಎರಡು ತಂಡಗಳಿಂದ ಬರೋಬ್ಬರಿ 807 ರನ್ ಗಳು ಹರಿದು ಬಂತು. ಬೌಲರ್ ಗಳ ಬೆವರಿಳಿಸಿದ ಎರಡೂ ತಂಡದ ಬ್ಯಾಟ್ಸ್ ಮ್ಯಾನ್ ಗಳು ಒಟ್ಟು 54 ಬೌಂಡರಿ ಮತ್ತು 46 ಸಿಕ್ಸರ್ ಗಳನ್ನು ಬಾರಿಸಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ವಿಂಡೀಸ್ ಬೌಲರ್ ಗಳನ್ನು ಇಂಗ್ಲೆಂಡ್ ಪಡೆ ಚೆಂಡಾಡಿತು. ಆರಂಭಿಕ ಆಟಗಾರರಾದ ಜಾನಿ ಬೆರಿಸ್ಟೊ(56) ಮತ್ತು ಅಲೆಕ್ಸ್ ಹೇಲ್ಸ್ (82) ಮೊದಲ ವಿಕೆಟ್ ಗೆ ಭರ್ತಿ ನೂರು ರನ್ ಜೊತೆಯಾಟ ನಡೆಸಿದರು. ಜಾನಿ ಬೆರಿಸ್ಟೊ ಅವರ ವಿಕೆಟ್ ಕಿತ್ತ ಯುವ ಬೌಲರ್ ಒಶಾನೆ ಥೋಮಸ್ ಜೋ ರೂಟ್ (5) ರ ವಿಕೆಟ್ ಕಿತ್ತು ತಳ ಊರಲು ಬಿಡಲಿಲ್ಲ.
ಆದರೆ ನಂತರ ಜೊತೆಯಾದ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ನಾಲ್ಕನೇ ವಿಕೆಟ್ ಗೆ ಅದ್ಭುತ ದ್ವಿ ಶತಕದ ಜೊತೆಯಾಟ ನಡೆಸಿದರು. ನಾಯಕ ಮಾರ್ಗನ್ 88 ಎಸೆತಗಳಿಂದ 103 ರನ್ ಬಾರಿಸಿದರು. 8 ಬೌಂಡರಿ ಮತ್ತು 6 ಸಿಕ್ಸರ್ ಗಳನ್ನು ಸಿಡಿಸಿದ ಮಾರ್ಗನ್ ತಮ್ಮ ಏಕದಿನ ಬಾಳ್ವೆಯ 12 ನೇ ಶತಕ ಬಾರಿಸಿದರು.
ಮತ್ತೊಂದೆಡೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಜೋಸ್ ಬಟ್ಲರ್ ಕೇವಲ 77 ಎಸೆತಗಳಲ್ಲಿ 150 ರನ್ ಸಿಡಿಸಿದರು. ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ ಬಟ್ಲರ್ ಸಿಡಿಸಿದ್ದು ಬರೋಬ್ಬರಿ 13 ಬೌಂಡರಿ ಮತ್ತು 12 ಸಿಕ್ಸರ್ ಗಳು. ಅಂತಿಮವಾಗಿ 50 ಓವರ್ ಅಂತ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್ ನಷ್ಟದಲ್ಲಿ 418 ರನ್ ಗಳಿಸಿತು. ಒಟ್ಟು 24 ಸಿಕ್ಸರ್ ಸಿಡಿಸಿದ ಆಂಗ್ಲರು ಒಂದು ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಹೊಸ ವಿಶ್ವ ದಾಖಲೆ ಬರೆದರು.
ಸಿಡಿದ ಗೇಲ್: ಬೃಹತ್ ರನ್ ಗುರಿ ಪಡೆದ ಕೆರಿಬಿಯನ್ನರಿಗೆ ಕ್ರಿಸ್ ಗೇಲ್ ಸ್ಪೋಟಕ ಬ್ಯಾಟಿಂಗ್ ಸಾಥ್ ಕೊಟ್ಟರು. ಆದರೆ ಗೇಲ್ ಬೆಂಬಲಕ್ಕೆ ಮೊದಲೆರಡು ಆಟಗಾರರು ನಿಲ್ಲಿಲಿಲ್ಲ. 44 ರನ್ ಗೆ ಎರಡು ವಿಕೆಟ್ ಕಳೆದುಕೊಂಡ ನಂತರ ಡ್ಯಾರೆನ್ ಬ್ರಾವೊ ಜೊತೆಯಾದ ಗೇಲ್ ಇಂಗ್ಲೆಂಡ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೇವಲ 97 ಎಸೆಗಳನ್ನು ಎದುರಿಸಿದ ಗೇಲ್ ಭರ್ಜರಿ 162 ರನ್ ಬಾರಿಸಿದರು. ಈ ಇನ್ನಿಂಗ್ಸ್ ನಲ್ಲಿ ಕೆರಿಬಿಯನ್ ದೈತ್ಯ 11 ಬೌಂಡರಿ ಮತ್ತು 14 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದರು.ಬ್ರಾವೊ 61 ರನ್ ಗಳಿಸಿದರೆ, ಕಾರ್ಲೋಸ್ ಬ್ರಾತ್ ವೇಟ್ 50 ಮತ್ತು ಕೊನೆಯಲ್ಲಿ ಆಶ್ಲೇ ನರ್ಸ್ 43 ರನ್ ಬಾರಿಸಿದರು. ಪ್ರಮುಖ ಬ್ಯಾಟ್ಸ ಮನ್ ಗಳಾದ ಶೈ ಹೋಪ್ ಮತ್ತು ಶಿಮ್ರನ್ ಹೆತ್ಮೈರ್ ವಿಫಲತೆ ತಂಡಕ್ಕೆ ಮುಳುವಾಯಿತು.
ಕೊನೆಯ ಮೂರು ಓವರ್ ನಲ್ಲಿ 31 ರನ್ ಗಳಿಸಿ ಪಂದ್ಯ ಗೆಲ್ಲುವ ಅವಕಾಶ ವಿಂಡೀಸ್ ಗಿತ್ತು. ಕೈಯಲ್ಲಿ ನಾಲ್ಕು ವಿಕೆಟ್ ಗಳೂ ಇದ್ದವು. ಆದರೆ 47 ನೇ ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಸ್ಪಿನ್ನರ್ ಆದಿಲ್ ರಶಿದ್ ವೆಸ್ಟ್ ಇಂಡೀಸ್ ಆಸೆಯನ್ನು ನುಚ್ಚು ನೂರು ಮಾಡಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 389 ರನ್ ಗೆ ತನ್ನಲ್ಲಾ ವಿಕೆಟ್ ಕಳೆದುಕೊಂಡು 29 ರನ್ ಗಳಿಂದ ಇಂಗ್ಲೆಂಡ್ ಗೆ ಸೋಲೊಪ್ಪಿಕೊಂಡಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.