ಮೈಸೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಹೇಳಿದರು.
ಮಹಾರಾಣಿ ಮಹಿಳಾ ವಿಜಾnನ ಕಾಲೇಜಿನ ಕಲಾಮಂಟಪದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಲಲಿತಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿ ಜೀವನವೇ ಮೆಟ್ಟಿಲಾಗಿದೆ. ಬದುಕು ರೂಪಿಸಿಕೊಳ್ಳಲು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಕಾಲೇಜು ಸ್ಫೂರ್ತಿದಾಯಕವಾಗಿದೆ.
ವಿದ್ಯಾರ್ಥಿ ಜೀವನ ಸೂಕ್ಷ್ಮ ಹಾಗೂ ಉಲ್ಲಾಸದಾಯಕವಾದದ್ದು. ಆದ್ದರಿಂದ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಚಿಮ್ಮುವ ಹಲಗೆ ಆಗಬೇಕಿದ್ದು, ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಹೀಗಾಗಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಓದುವುದರತ್ತ ಗುರಿ ಇಡುವುದರ ಜತೆಗೆ, ನಿಮ್ಮ ಓದು ಇನ್ನಿತರ ಚಟುವಟಿಕೆಗಳಿಗೂ ಪೂರಕವಾಗಿರಬೇಕು. ವಿದ್ಯಾರ್ಥಿಗಳ ಸ್ಪಷ್ಟ ದಾರಿ ನಿರ್ಧಾರವಾಗುವುದು ವಿದ್ಯಾರ್ಥಿ ಜೀವನದಲ್ಲಿ. ಹೀಗಾಗಿ ಒಳ್ಳೆಯದನ್ನು ಹುಡುಕಿ ತೆಗೆದು, ಕೆಟ್ಟ ಪ್ರಭಾವದಿಂದ ದೂರವಿರಬೇಕು. ತಾನೇ ಮೇಧಾವಿ, ಅಹಂಕಾರ ಮೆರೆದರೆ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ವಿದ್ಯಾರ್ಥಿಗಳಲ್ಲಿ ಮಾನವಿಯವತೆ, ವಿಧೇಯತೆ ಇರಬೇಕು.
ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಲಲಿತಕಲಾ ಸಂಘ ಆರಂಭಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮುಕುತಿಯ ಮೂಗುತಿ ನಾಟಕ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಎನ್.ಶ್ರೀನಿವಾಸ್, ಸಂಚಾಲಕಿ ಡಿ.ಶೀಲಾಕುಮಾರಿ ಇನ್ನಿತರರಿದ್ದರು.