ಗ್ರಾಸ್ ಐಲೆಟ್: ಇಲ್ಲಿನ ಡ್ಯಾರೆನ್ ಸ್ಯಾಮಿ ಮೈದಾನದಲ್ಲಿ ಶುಕ್ರವಾರ ಟಿ20 ವಿಶ್ವಕಪ್ ಸೂಪರ್-8 ಗ್ರೂಪ್-2ರಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಣಕ್ಕಿಳಿಯಲಿವೆ. ಎರಡೂ ತಂಡಗಳಿಗೂ ಇದು ಸೂಪರ್-8ರ ಎರಡನೇ ಪಂದ್ಯವಾಗಿದೆ.
ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಅಮೆರಿಕಾ ವಿರುದ್ಧ 18 ರನ್‌ಗಳಿಂದ ಗೆದ್ದಿತ್ತು. ಗುರುವಾರ, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದಿದೆ. ಗೆಲುವಿನ ಶುಭಾರಂಭ ಮಾಡಿರುವ ಇತ್ತಂಡಗಳೂ ಇಂದು ಗೆಲುವಿಗಾಗಿ ಜಿದ್ದಾಜಿದ್ದಿ ಸೆಣಸಾಟ ನಡೆಸಿದರೆ ಅಚ್ಚರಿಯಿಲ್ಲ.
ಟಿ20 ವಿಶ್ವಕಪ್‌ನಲ್ಲಿ ಒಟ್ಟು 25 ಬಾರಿ ಇತ್ತಂಡಗಳು ಮುಖಾಮುಖೀಯಾಗಿವೆ. ಇದರಲ್ಲಿ 12ರಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, 12ರಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದೆ. 1 ಪಂದ್ಯ ರದ್ದಾಗಿತ್ತು. ಈ ಅಂಕಿ-ಅಂಶವೇ ಸಾಕು; ಎರಡೂ ತಂಡಗಳು ಸಮಾನ ಶಕ್ತಿ, ಸಾಮರ್ಥ್ಯ ಹೊಂದಿವೆ ಎಂಬುದು ಅರ್ಥವಾಗುತ್ತದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್, ಎಲ್ಲ ಅಡೆತಡೆಗಳನ್ನು ಮೀರಿ, ಗ್ರೂಪ್ “ಬಿ’ಯಿಂದ 2ನೇ ತಂಡವಾಗಿ ಸೂಪರ್-8ಕ್ಕೇರಿತ್ತು. ಇತ್ತ, ಹರಿಣಗಳ ಪಡೆ, ಗ್ರೂಪ್ “ಡಿ’ಯಿಂದ ಅಜೇಯ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿತ್ತು. ಸದ್ಯ ತಲಾ 1 ಗೆಲುವಿನೊಂದಿಗೆ ಎರಡೂ ತಂಡಗಳು ಗ್ರೂಪ್-2ರಲ್ಲಿ ಪ್ರಥಮ, ದ್ವಿತೀಯ ಸ್ಥಾನದಲ್ಲಿವೆ. +1.343 ನೆಟ್ ರನ್ ರೇಟ್ ಹೊಂದಿರುವ ಕಾರಣ ಇಂಗ್ಲೆಂಡ್, ಮೊದಲ ಸ್ಥಾನದಲ್ಲಿದೆ.