Advertisement

ಸಹನೆಯೇ ಸಂಪತ್ತಾಗಲಿ

03:27 PM Jul 23, 2018 | |

ಬದುಕಿನ ಕುರಿತು ಯೋಚಿಸದ ವ್ಯಕ್ತಿಯೇ ಇಲ್ಲ. ಕಂಡ ಕನಸನ್ನು ಸಾಕಾರಗೊಳಿಸುವತ್ತ ಮನಸ್ಸನ್ನು ಹರಿಯಬಿಡುತ್ತಾರೆ. ಸಾಧನೆಗೆ ಜೀವನ ಪೂರ್ತಿ ಕಾರ್ಯಪ್ರವೃತ್ತನಾಗುತ್ತಾನೆ. ಈ ನಡುವೆ ನಮ್ಮ ನಡುವೆ ಕಾಡುವ ಏಕಮಾತ್ರ ಪ್ರಶ್ನೆ ಜೀವನವೆಂದರೇನು? ಈ ಪ್ರಶ್ನೆಗೆ ಎಲ್ಲರಲ್ಲೂ ಉತ್ತರವಿಲ್ಲ. ಕೆಲವರ ಪ್ರಕಾರ ಜೀವನವೆಂದರೆ ಸಂಘರ್ಷಮಯವಾದದ್ದು ಎಂದೇ ವ್ಯಾಖ್ಯಾನ ಕೊಡುತ್ತಾರೆ. ಆದರೆ ಅದಲ್ಲ. ಜೀವನ ಎಂದರೆ ಆಯ್ಕೆಗಳ ಸರಣಿ. ಆಯ್ಕೆ ಮಾಡಿಕೊಂಡಿದ್ದನ್ನು ಸತತ ಹೋರಾಟದ ಮೂಲಕ ಸಾಧಿಸುವ ದಿನಗಳೇ ಜೀವನ. ಆದರೆ ಪ್ರತಿಯೊಬ್ಬರೂ ಜೀವನದ ಬಗ್ಗೆ ಒಂದೇ ವ್ಯಾಖ್ಯಾನ ಕೊಡಲು ಸಾಧ್ಯವಿಲ್ಲ. ಅವರವರ ಅನುಭವಗಳ ಪ್ರಕಾರ ಅದಕ್ಕೆ ನೂರಾರು ಅರ್ಥಗಳಿರಬಹುದು.

Advertisement

ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿ ಲಭಿಸಬೇಕಾದರೆ ಕೆಲವನ್ನು ತಪಸ್ಸಿನ ರೀತಿಯಲ್ಲಿ ಕಾಣಬೇಕು ಹಾಗೂ ಆಚರಿಸಬೇಕಾಗುತ್ತದೆ. ಜೀವನದಲ್ಲಿ ಏಳು ಬೀಳುಗಳು ಸಾಮಾನ್ಯ. ಜಯವಾದಾಗ ಅಮಿತ ಸಂಭ್ರಮವನ್ನಾಚರಿಸುವುದು, ಸೋಲು ಎದುರಾದಾಗ ಮಾನಸಿಕವಾಗಿ ಕುಗ್ಗುವುದು ಬಹುತೇಕರ ಪಾಡು. ಸೋಲು ಹಾಗೂ ಗೆಲುವನ್ನು ಸಮಾನಾಗಿ ಸ್ವೀಕರಿಸಿದಾಗ ಜೀವನ ಮಧುರವಾಗಿ ನಮ್ಮನ್ನು ಅಪ್ಪಿಕೊಳ್ಳುತ್ತದೆ. ನಮ್ಮಲ್ಲಿ ಸಮಗ್ರತೆಯ ಭಾವವೇ ಇಲ್ಲವೆಂದಾಗ ಸಮನ್ವಯತೆಯನ್ನು ಕಾಣುವುದು ಗಗನ ಕುಸುಮವಾಗುತ್ತದೆ.

ಮನಸ್ಸನ್ನು ಬಲಗೊಳಿಸುವುದು ಹೇಗೆ ? ಸಹನೆ ಎಂಬುದು ಹಲವು ರೂಪದಲ್ಲಿ ನಮ್ಮನ್ನು ರಕ್ಷಿಸುತ್ತದೆ. ಸಣ್ಣಪುಟ್ಟ ವಿಚಾರದಲ್ಲೂ ದುಃಖ ಪಡುವುದು, ಕೋಪವನ್ನು ನೆಚ್ಚಿಕೊಂಡು ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳಬಾರದು. ತಾಳ್ಮೆ ಒಂದು ತಪಸ್ಸು ಇದ್ದಂತೆ. ಈ ತಪಸ್ಸೇ ನಮ್ಮಲ್ಲಿರುವ ದೌರ್ಬಲ್ಯಗಳನ್ನು ದಹಿಸಿ, ದೈನ್ಯಾವಸ್ಥೆಯನ್ನು ದೂರಗೊಳಿಸಲು ನೆರವಾಗಬಲ್ಲುದು. ಇದೇ ಗುಣ ನಮ್ಮನ್ನು ಯಶಸ್ಸಿನ ತುತ್ತ ತುದಿಯ ಮೇಲೆ ಕರೆದೊಯ್ಯುತ್ತದೆ. ಆಧುನಿಕ ಒತ್ತಡದ ಜೀವನದಲ್ಲಿ ನಾವು ಮೇಲಿಂದ ಮೇಲೆ ಕೋಪಗೊಳ್ಳುತ್ತಿದ್ದೇವೆ. ಕೋಪ ನಮ್ಮ ಮನಸ್ಸಿನ ದೌರ್ಬಲ್ಯದ ಸಂಕೇತವಾಗಿದೆ. ತಾಳ್ಮೆ ಸಫ‌ಲತೆಯ ಸಂಕೇತ ಎಂಬುದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇಂದಿನದು. ತಾಳಿದವನು ಬಾಳಿಯಾನು ಎಂಬ ಗಾದೆ ಮಾತನ್ನು ಆಲಿಸಿದರೆ ಸಾಕು. ದೀರ್ಘ‌ವಾದ ಸುಖಕರ ಬಾಳಿಗೆ ತಾಳ್ಮೆಯೊಂದೇ ಪರಿಹಾರ ಎಂಬುದಕ್ಕೆ ಬೇರೆ ನಾಣ್ನುಡಿ ಬೇಕಾಗಿಲ್ಲ.

ಸಹನೆ ಹೇಗೆ ?
ಸಹನೆಯ ಆದರ್ಶವನ್ನು ಜೀವನದಲ್ಲಿ ರೂಢಿಸಿಕೊಳ್ಳವುದು ಅಷ್ಟೇನೂ ಸುಲಭದ ಕೆಲಸವಲ್ಲವಾದರೂ ಅಸಾಧ್ಯವೇನಲ್ಲ. ತಾಳ್ಮೆ ಕಹಿಯಾದರೂ ಅದರ ಫ‌ಲ ಸಿಹಿ ಎನ್ನುವದನ್ನು ಅರಿಯಬೇಕು. ಕೆಲವು ಸಂದರ್ಭದಲ್ಲಿ ಧರ್ಮ ಸಂಕಟದ ಪರಿಸ್ಥಿತಿ ಹುಟ್ಟಿಕೊಂಡಿರುತ್ತದೆ. ಆಗ ತಾಳ್ಮೆಯಿಂದಿರಬೇಕೆ? ಅಥವಾ ಪ್ರತಿಕ್ರಿಯೆ ತೋರಬೇಕೆ? ಎಂಬ ಸಮಸ್ಯೆ ತಲೆದೋರುತ್ತದೆ. ಅಂಥ ಸ್ಥಿತಿಯಲ್ಲಿ ಅನುಭವಿಗಳ ಸಲಹೆ ಪಡೆಯಬಹುದು. ಒಂದು ವೇಳೆ ಸೂಕ್ತ ಸಲಹೆ ಸಿಗದಿದ್ದರೆ, ಇಕ್ಕಟ್ಟಿಗೆ ಸಿಲುಕಿದಾಗ ಪ್ರತಿಕ್ರಿಯೆ ತೋರಿಸುವುದೇ ಒಳಿತು. ಏಕೆಂದರೆ, ಸಹನೆಯ ಹೆಸರಿನಲ್ಲಿ ದುರ್ಬಲರಾಗಬಾರದು. ಅದರೆ, ಸಂದರ್ಭ ಯುಕ್ತಾಯುಕ್ತತೆಯನ್ನು ತಿಳಿದು ಕೆಲವೆಡೆ ತಾಳ್ಮೆ ತೆಗೆದುಕೊಳ್ಳಬೇಕು. ಇನ್ನು ಕೆಲವು ಕಡೆ ಪ್ರತಿಕ್ರಿಯೆ ತೋರಬೇಕು.

ನಾವು ಯೋಚಿಸಿದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಿದರೆ ತಾಳ್ಮೆ ಪರೀಕ್ಷಿಸಲು ವೇದಿಕೆಯಾಗಬಹುದು. ಪ್ರೀತಿಯ ಭಾವ, ಕ್ಷಮೆ ಬೆಳೆಸಿಕೊಂಡು ನಮ್ಮಂತೆ ಪರರು ಎಂದು ಭಾವಿಸಿ ಅವರೆಡೆಗೆ ದಯೆಯ ದೃಷ್ಟಿ ಬೀರದರೆ ಸಹನೆ ನಮ್ಮ ಸಂಪತ್ತಾಗಲಿದೆ. ಜೀವನದ ಸೌಂದರ್ಯ ಅಡಗಿರುವದೇ ಸಹನೆಯಲ್ಲಿ.

Advertisement

ಸಮಾಜದಲ್ಲಿ ಅನಾರೋಗ್ಯಕರ, ಅಸುಖಕರ ವಾತಾವರಣವು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿ ಸಹನೆ ಮತ್ತು ಸಂಯಮಗಳ ತೀವ್ರ ಅಭಾವ. ಆದ್ದರಿಂದ ನಾವೆಲ್ಲರೂ ಸಹನೆಯನ್ನು, ಸಹನೆಯ ಅರ್ಥವನ್ನು ತಿಳಿದುಕೊಂಡು ರೂಢಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ಸಹನೆ ರೂಢಿಸಿಕೊಡಾಗ ಮಾತ್ರ ಸುಖೀ ಜೀವನವನ್ನು ಪಡೆದು ಸಮೃದ್ಧ ಸಮಾಜವನ್ನು ಕಟ್ಟಲು ಸಾಧ್ಯ. ತಾಳ್ಮೆಯನ್ನು ನಾವು ರೂಢಿಸಿಕೊಂಡರೆ ಭುವನವೇ ಸ್ವರ್ಗವಾಗಿ ಗೋಚರಿಸುವುದಂತು ಖಚಿತ.

ಸಹನೆ ಮುಖ್ಯ
ನಮ್ಮಲ್ಲಿ ಬಹುತೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ತಾಳ್ಮೆ ಎನ್ನುವದು ಕೇವಲ ಸಾಧಕರಿಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು. ಆದರೆ ಸಹನೆ ಎನ್ನುವಂತದ್ದು ಮಾನವನ ಅಮೂಲ್ಯವಾದ ಗುಣ ಎಂಬುದನ್ನು ಮರೆಯಲಾಗದು. ಸಮಾಜದಲ್ಲಿ ಹೆಚ್ಚುತ್ತಿರುವ ಅವಘಡಗಳನ್ನು ತಪ್ಪಿಸಲು ಸಹನೆಯಿಂದ ಮಾತ್ರ ಸಾಧ್ಯ. ದ್ವೇಷ ಮತ್ತು ಅತಿಯಾದ ಕೋಪ, ಅಸಹನೆಯಿಂದಾಗಿ ಸಮೃದ್ಧ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಅಪರಾಧಗಳು ಹೆಚ್ಚಾಗುತ್ತಿವೆ. ಅನೇಕ ಮಹಾಪುರುಷರು, ವೀರ ಮಹಿಳೆಯರು ಜೀವನದಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸಿದರೂ, ತಾಳ್ಮೆಗೆಡದೆ, ತಮ್ಮ ಗುರಿಯನ್ನು ಸಾಧಿಸಿದರು. ಅಂಬೇಡ್ಕರ್‌ ತಮ್ಮ ಜೀವನದಲ್ಲಿ ಅನೇಕ ಕಹಿ ಯಾತನೆಗಳನ್ನು ಅನುಭವಿಸಿ, ಬಡತನದಲ್ಲಿ ಬೆಂದರೂ, ಸಹನೆ ಕಳೆದುಕೊಳ್ಳದೇ ಇದ್ದ ಕಾರಣ ನಮ್ಮ ಬೃಹತ್‌ ರಾಷ್ಟ್ರಕ್ಕೆ ಸಂವಿಧಾನ ಶಿಲ್ಪಿ ಎನಿಸಿಕೊಂಡರು. ಗಾಂಧಿಜೀಯವರ ಶಾಂತಿ ಅಹಿಂಸೆಯ ತಣ್ತೀದಿಂದ ನಾವಿಂದು ಸ್ವತಂತ್ರ ಭಾರತದ ಪ್ರಜೆಗಳಾಗಿದ್ದೇವೆ.

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next