ತಿ.ನರಸೀಪುರ: ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ನಿರ್ದಿಷ್ಟ ಗುರಿ ಇಟ್ಟುಕೊಂಡು ಪರಿಶ್ರಮಪಡಬೇಕು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪದವಿ ವಿದ್ಯಾರ್ಥಿಗಳಿಗೆ ಗುರು, ಗುರಿ ಎರಡೂ ಮುಖ್ಯ. ವಿದ್ಯಾರ್ಥಿ ಜೀವನದಲ್ಲೇ ಮೈಮರೆತರೆ ಜೀವನದಲ್ಲಿ ಗುರಿ ಮುಟ್ಟುವುದು ಕಷ್ಟ.
ಪ್ರತಿಭೆ ಯಾರ ಸ್ವತ್ತು ಅಲ್ಲ, ವಿದ್ಯೆ ಕದಿಯಲಾಗದ ಆಸ್ತಿ, ಮೊಬೈಲ್, ಟಿವಿಗಳಲ್ಲಿ ಬರುವ ಸಕರಾತ್ಮಕ ವಿಷಯಗಳನ್ನು ಮೈಗೂಡಿಸಿಕೊಂಡು, ಜೀವನದಲ್ಲಿ ಸಹನೆ, ತಾಳ್ಮೆ, ಸಹಬಾಳ್ವೆ, ಆತ್ಮವಿಶ್ವಾಸ ಹಾಗೂ ಸಮಯ ಪಾಲನೆ ಮಾಡಿದರೆ, ಭವ್ಯ ಭಾರತದ ಪ್ರಜೆಗಳಾಗಬಹುದು ಎಂದು ಹೇಳಿದರು.
ಸಂಘದ ಗೌರವ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಮಾತನಾಡಿ, ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಪರಿಪೂರ್ಣತೆ ಹೊಂದಬೇಕು. ಈಗ ಕಲಿಕೆ ಸರಳವಾಗಿದೆ. ಹೆಚ್ಚು ಅಂಕ ಪಡೆದರೆ, ಅರ್ಹತೆ ಆಧಾರದಲ್ಲಿ ಉದ್ಯೋಗ ಸಿಗುತ್ತದೆ. ಅಲ್ಲದೆ ಐಎಎಸ್ ಪರೀಕ್ಷೆ ಬರೆಯುವವರಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಮಂಜುಶ್ರೀ, ಮಧುರ, ನಾಗಾಶ್ರೀ, ಅಂತಾರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಗೆದ್ದವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ.ರಾಮಚಂದ್ರ, ಕುರುಬೂರು ಗ್ರಾಮದ ಶಿಕ್ಷಕ ಮಂಜುನಾಥ್, ವಿದ್ಯೋದಯ ಕಾಲೇಜು ಉಪನ್ಯಾಸಕಿ ಮಾನಸಾ, ಎ.ನಟರಾಜು, ಡಿ.ಉಮಾಪತಿ, ಕೃತಿಕಾ, ಪ್ರಕಾಶ್, ರಾಜಶೇಖರ, ಕಿರಣ್‌ಕುಮಾರ್, ಉಪನ್ಯಾಸಕರು ಭಾಗವಹಿಸಿದರು.