Advertisement

ಎಂಡೋ ಸಂತ್ರಸ್ತರ ಪುನರ್ವಸತಿ ಮರೆತ ಸರಕಾರ 

11:55 AM Mar 10, 2018 | |

ಆಲಂಕಾರು : ಎಂಡೋ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಶಾಶ್ವತ ಪುನರ್ವಸತಿ ಬಗ್ಗೆ ಬಡಾಯಿ ಕೊಚ್ಚುತ್ತಿದ್ದ ರಾಜ್ಯ ಸರಕಾರದ ತನ್ನ ಕೊನೆಯ ಬಜೆಟ್‌ನಲ್ಲಿ ಕಿಂಚಿತ್ತು ಅನುದಾನವನ್ನೂ ಮೀಸಲಿಡದೆ ಸಂತ್ರಸ್ತರ ಬಾಳಿನಲ್ಲಿ ಚೆಲ್ಲಾಟವಾಡಿದೆ.

Advertisement

ಗೇರು ತೋಟಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಬೆಳೆಸಿರುವ ರಾಜ್ಯ ಸರಕಾರ ಗೇರು ಅಭಿವೃದ್ಧಿ ನಿಗಮದ ಮೂಲಕ ನಿರ್ವಹಣೆ ಮಾಡುತ್ತಿದೆ. ಗೇರು ತೋಟಗಳಿಗೆ 1980ರಿಂದ 2000ರ ತನಕ ಎಂಡೋಸಲ್ಫಾನ್‌ ಎಂಬ ಕೀಟನಾಶಕವನ್ನು ಅವೈಜ್ಞಾನಿಕವಾಗಿ ವೈಮಾನಿಕವಾಗಿ ಸಿಂಪಡಿಸಿತ್ತು. ಇದರ ಪರಿಣಾಮ ವೈದ್ಯಲೋಕಕ್ಕೆ ಸವಾಲಾಗಿರುವ ಶಾಶ್ವತ ಅಂಗವೈಕಲ್ಯ, ಬುದ್ಧಿಮಾಂದ್ಯ, ಮೂಕ, ಕಿವುಡ, ಚರ್ಮ ರೋಗ, ಅಸ್ತಮಾ, ಬಂಜೆತನ, ಹೃದ್ರೋಗ, ಅಪಸ್ಮಾರ, ಕ್ಯಾನ್ಸರ್‌ -ಹೀಗೆ ನಾನಾ ಬಗೆಯ ರೋಗಗಳು ಕರಾವಳಿಯ ಹಲವು ಗ್ರಾಮಗಳಲ್ಲಿ ಜನರನ್ನು ಕಾಡುತ್ತಿವೆ.

ನ್ಯಾಯಾಂಗಕ್ಕೆ ತಪ್ಪು ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,387.25 ಹೆಕ್ಟೇರ್‌, ಉ.ಕ.ದಲ್ಲಿ 7,299.53 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಗೇರು ತೋಟಗಳಿದ್ದು, ಇಲ್ಲಿ ಎಂಡೋ ಸಿಂಪಡಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತರಿಗೆ ಸಮರ್ಪಕವಾಗಿ ಮಾಸಾಶನ, ಉಚಿತ ಔಷಧ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ, ಉಚಿತ ಪಡಿತರ ನೀಡುವುದಾಗಿ ಹೈಕೋರ್ಟ್‌ಗೆ ರಾಜ್ಯ ಸರಕಾರ ಭರವಸೆ ನೀಡಿತ್ತು. ಇದರಲ್ಲಿ ಬಸ್‌ ಪಾಸ್‌ ಹಾಗೂ ಮಾಸಾಶನ ಹೊರತುಪಡಿಸಿ ಉಳಿದ ಯೋಜನೆಗಳು ಅನುಷ್ಠಾನವಾಗಿಲ್ಲ. 

ಬೆಳ್ತಂಗಡಿ ತಾಲೂಕಿನ ಉಜಿರೆ, ಸುಳ್ಯ ತಾಲೂಕಿನ ಬೆಳ್ಳಾರೆ, ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಶಾಶ್ವತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೈಕೋರ್ಟ್‌ಗೆ ಭರವಸೆ ನೀಡಲಾಗಿತ್ತು. ಎಂಡೋ ಸಂತ್ರಸ್ತರ ಮನೆ ಮನೆಗೆ ತೆರಳಿ ಆಧಾರ್‌ ಕಾರ್ಡ್‌ ಮಾಡಿಕೊಡುವುದು, ಗ್ರಾಮಕ್ಕೊಂದು ಆರೋಗ್ಯ ಸಹಾಯಕಿ ನೇಮಕ, ಎಂಡೋ ಪೀಡಿತ ಕುಟುಂಬಕ್ಕೆ ಬಿಪಿಎಲ್‌ ಪಡಿತರ ಚೀಟಿ ಇತ್ಯಾದಿ ಯೋಜನೆಗಳನ್ನು ಸರಕಾರವೇ ಮರೆತಿದೆ. ಉಡುಪಿ ಹಾಗೂ ಉ.ಕ. ಜಿಲ್ಲೆಗಳಲ್ಲಿ ಒಂದೇ ಒಂದು ಪಾಲನ ಕೇಂದ್ರ ನಿರ್ಮಾಣವಾಗಿಲ್ಲ.

ಎಲ್ಲಿ ಹೋಯಿತು ಶಾಶ್ವತ ಪುನರ್ವಸತಿ ಕೇಂದ್ರ?
ಸರಕಾರ ಮೂರು ಜಿಲ್ಲೆಗೆ ಒಂದೊಂದು ಶಾಶ್ವತ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಪುತ್ತೂರು ತಾಲೂಕಿನ ಆಲಂಕಾರು ಗ್ರಾ.ಪಂ. ಅಧೀನದಲ್ಲಿದ್ದ 5 ಎಕ್ರೆ ಮತ್ತು ಕುಂದಾಪುರ ತಾಲೂಕಿನ ನಾಡ ಗ್ರಾ.ಪಂ. ಅಧೀನದಲ್ಲಿದ್ದ 5 ಎಕ್ರೆ (ಸರ್ವೇ ನಂಬ್ರ 94) ಜಾಗವನ್ನು ಇದಕ್ಕಾಗಿ ಕಾಯ್ದಿರಿಸಿತ್ತು. ಆದರೆ, ಮುಂದಿನ ಪ್ರಕ್ರಿಯೆ ನಡೆದಿಲ್ಲ. ಕೊನೆಯ ಬಜೆಟ್‌ನಲ್ಲೂ ಅನುದಾನ ಮೀಸಲಿಟ್ಟಿಲ್ಲ.

Advertisement

ಪರಿಹಾರ ಮರೀಚಿಕೆ
ಎಂಡೋ ಸಂತ್ರಸ್ತರಾದ ಹಲವರಿಗೆ ಸರಕಾರ ಮಾಸಾಶನ ನೀಡಲು ಸತಾಯಿಸುತ್ತಿದೆ. ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ಶಿವಪ್ರಸಾದ್‌ನನ್ನು 2015ರಲ್ಲಿ ಎಂಡೋ ಪೀಡಿತ ಎಂದು ಗುರುತಿಸಲಾಗಿದೆ. ಕೆದಿಲ ಗ್ರಾಮದ ನಿವಾಸಿ ಶಿವಪ್ಪ ನಾಯ್ಕ ಅವರ ಪುತ್ರಿ ಜಸ್ಮಿತಾಳನ್ನು 2017ರಲ್ಲಿ ಎಂಡೋ ಪೀಡಿತೆ ಎಂದು ಗುರುತಿಸಲಾಗಿದೆ. ಅವರಿಗೆ ಮಾಸಾಶನ ಸಿಕ್ಕಿಲ್ಲ. ಕಡೇಶಿವಾಲಯ ಗ್ರಾಮದ ನಿವಾಸಿ ಯಮುನಾ ಹಾಗೂ ಸುಂದರ ದಂಪತಿಯ ಎಂಡೋ ಪೀಡಿತ ಮಕ್ಕಳಾದ ಮಿಥುನ್‌ ಹಾಗೂ ತೃಪ್ತಿಗೆ 2017ರಲ್ಲಿ ಮಾಸಾಶನ ಬಿಡುಗಡೆಯಾದರೂ ಹಣ ಖಾತೆಗೆ ಜಮೆಯಾಗಿರಲಿಲ್ಲ. ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ ಬಳಿಕ 2018 ಫೆಬ್ರವರಿಯಲ್ಲಿ ನಾಲ್ಕು ತಿಂಗಳ ಮಾಸಾಶನ ಖಾತೆಗ ಜಮೆಯಾಗಿದೆ. ಮಾಸಾಶನ ವಂಚಿತರಾದವರಿಗೆ ಕಾನೂನು ಸೇವಾ ಪ್ರಾಧಿಕಾರವೇ ನ್ಯಾಯ ನೀಡಬೇಕೆ? ಸರಕಾರ ನಿದ್ರಿಸಿದೆಯೇ? ಎಂದು ಸಾಮಾಜಿಕ ಕಾರ್ಯಕರ್ತ ಸಂಜೀವ ಕಬಕ ಪ್ರಶ್ನಿಸಿದರು.

ಮೂರು ಜಿಲ್ಲೆಗಳಲ್ಲಿ 7,106 ಎಂಡೋ ಸಂತ್ರಸ್ತರು
ಅಂಕಿ-ಅಂಶಗಳ ಪ್ರಕಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 7,106 ಎಂಡೋ ಸಂತ್ರಸ್ತರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,762 ಎಂಡೋ ಸಂತ್ರಸ್ತರಿದ್ದು, 774 ಜನರು ಶೇ. 100 ಅಂಗವಿಕಲರಾದರೆ, 2,301 ಮಂದಿ ಶೇ. 60 ಹಾಗೂ 568 ಜನರು ಶೇ. 25 ಅಂಗವಿಕಲರಾಗಿದ್ದಾರೆ. ಹಾಗೂ 119 ಎಂಡೋ ಪೀಡಿತರು ಅಸುನೀಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,513 ಎಂಡೋ ಸಂತ್ರಸ್ತರಿದ್ದು, 807 ಜನರು ಶೇ. 100 ಅಂಗವಿಕಲರಾದರೆ, 487 ಮಂದಿ ಶೇ. 60 ಹಾಗೂ 219 ಮಂದಿ ಶೇ. 25 ಅಂಗವಿಕಲರು. ಉತ್ತರ ಕನ್ನಡದಲ್ಲಿ 1,831 ಎಂಡೋ
ಸಂತ್ರಸ್ತರಿದ್ದು, 1,087 ಜನ ಶೇ. 100 ಅಂಗವಿಕಲರು. 744 ಮಂದಿಯಲ್ಲಿ ಶೇ. 60 ಅಂಗವೈಕಲ್ಯವಿದೆ. 50 ಎಂಡೋ ಸಂತ್ರಸ್ತರು ತೀರಿಕೊಂಡಿದ್ದಾರೆ.

ಸರಕಾರ ಸತ್ತುಹೋಗಿದೆ
ಸರಕಾರ ಎಂಡೋ ಸಂತ್ರಸ್ತರ ಪಾಲಿಗೆ ಸತ್ತು ಹೋಗಿದೆ. ಅಧಿವೇಶನದ ವೇಳೆ ಆರೋಗ್ಯ ಸಚಿವರು ಎಂಡೋ ಸಂತ್ರಸ್ತರಿಗೆ ಪರಿಹಾರ ನೀಡಲು ಚಿಂತನೆ ನಡೆಸಿದ್ದರು. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರಕ್ಕೆ ಅಡ್ಡ ಬಂದಿದ್ದಾರೆ. ಮುಂದಿನ ಚುನಾವಣೆಯ ವೇಳೆ ಎಲ್ಲ ಪಕ್ಷಗಳು ಎಂಡೋ ಸಂತ್ರಸ್ತರ ಪುನರ್ವಸತಿ ಬಗ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಬೇಕು.
– ಶ್ರೀಧರ ಕೊಕ್ಕಡ
ಎಂಡೋ ಹೋರಾಟ ಸಮಿತಿ ಅಧ್ಯಕ್ಷ,
ಕೊಕ್ಕಡ

 ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next