Advertisement

ಕಿವಿ ಸೋರುವಿಕೆಗೆ ಎಂಡೋಸ್ಕೋಪಿಕ್‌ (ಅಂತರ್ದರ್ಶನ) ಶಸ್ತ್ರಚಿಕಿತ್ಸೆ  

06:00 AM Aug 26, 2018 | |

ಕಿವಿ ಶಬ್ದಗಳನ್ನು ಕೇಳಲು ಮತ್ತು ದೇಹದ ಸಮತೋಲನಕ್ಕೆ ಬೇಕಾದಂತಹ ಒಂದು ಮುಖ್ಯ ಅಂಗ. ಆದ್ದರಿಂದ ಅದರ ಬಗ್ಗೆ ಕಾಳಜಿ ಅಗತ್ಯ. ಕಿವಿ ಸೋರುವಿಕೆ ಕಿವಿಯ ಒಂದು ಸೋಂಕು ರೋಗ. ಇದು ಒಂದು ಅಥವಾ ಎರಡೂ ಕಿವಿಗಳಿಗೆ ತಗಲಬಹುದು. ಶೀತ ನೆಗಡಿಯಿಂದ, ಪರದೆಯಲ್ಲಿ ತೂತಿರುವವರ ಕಿವಿಗೆ ನೀರು ಹೋಗುವುದರಿಂದ, ಕಿವಿಯ ಚರ್ಮ ಒಳಗಡೆ ಬೆಳೆದು ಮೂಳೆಯನ್ನು ಕೊರೆಯುವುದರಿಂದ (ಇಜಟlಛಿsಠಿಛಿಚಠಿಟಞಚ) ಕಿವಿ ಸೋರುತ್ತದೆ. ಕಿವಿ ಸೋರುವವರಿಗೆ ಕಿವಿಯಲ್ಲಿ  ನವೆ, ತುರಿಕೆ, ನೋವು , ಕಿವುಡುತನ, ತಲೆಸುತ್ತು ಮತ್ತು ಕಿವಿ ಒಳಗಡೆ ಶಬ್ದ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೊರಭಾಗದ ಕಿವಿ ಸೋರುವುದಕ್ಕಿಂತ ಮಧ್ಯಭಾಗದ ಕಿವಿ ಸೋರುವುದು ಜಾಸ್ತಿ ತೊಂದರೆ ಕೊಡುವಂತಹ ರೋಗ. 

Advertisement

ಮಧ್ಯ ಕಿವಿ ಸೋರುವಿಕೆಯಲ್ಲಿ, ಮಧ್ಯಕಿವಿಯ ಪರದೆಯ (ತಮಟೆಯ) ಮಧ್ಯದಲ್ಲಿ ತೂತು ಅಥವಾ ಕಿವಿಯ ಪರದೆಯ ಚರ್ಮ ಒಳಗಡೆ ಬೆಳೆದು ಮೂಳೆ ಕೊರೆಯುವಂತಹ ಎರಡು ಬೇರೆ ಬೇರೆ ರೋಗ ಲಕ್ಷಣಗಳಿವೆ. ಇವುಗಳಲ್ಲಿ ಎರಡನೆಯ ರೀತಿಯದ್ದು ಜಾಸ್ತಿ ಅಪಾಯಕಾರಿ. ಪರದೆಯ ಮಧ್ಯದಲ್ಲಿ ತೂತಾಗಿ ಸೋರುವವರಿಗೆ ಔಷಧಿಯಿಂದ ಸೋರುವುದನ್ನು ನಿಲ್ಲಿಸಬಹುದು. ಆದರೆ ತೂತು ಮುಚ್ಚಲು ಶಸ್ತ್ರಚಿಕಿತ್ಸೆಯ ಅಗತ್ಯ ಇರುತ್ತದೆ. ಇವರಿಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಕಿವಿ ಪದೇ ಪದೇ ಸೋರುತ್ತದೆ. ಕೇಳುವ ಶಕ್ತಿ ಇನ್ನೂ ಕುಂದುತ್ತದೆ. ಮಧ್ಯಕಿವಿಯ ಪರದೆಯನ್ನು ಸರಿಪಡಿಸುವುದಕ್ಕೆ ಮಿರಿಂಗೋಪ್ಲಾಸ್ಟಿ ಎಂದು ಹಾಗೂ ಮಧ್ಯೆ ಕಿವಿಯನ್ನು ಸರಿಪಡಿಸುವುದಕ್ಕೆ ಎಂದು ಕರೆಯುತ್ತಾರೆ. 

ಪರದೆಯ ಚರ್ಮ ಒಳಗಡೆ ಬೆಳೆಯುವ ರೋಗವನ್ನು ಔಷಧಿಯಿಂದ ಪರಿಹರಿಸಲಾಗುವುದಿಲ್ಲ. ಇದು ಜಾಸ್ತಿ ಅಪಾಯಕಾರಿ ಆದ್ದರಿಂದ ಈ ರೀತಿಯ ರೋಗ ಇರುವವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಗತ್ಯ.

ಮಧ್ಯ ಕಿವಿಯು ತುಂಬಾ ಸೂಕ್ಷ್ಮವಾದಂತಹ ಅಂಗವಾದುದರಿಂದ ಹಲವಾರು ದಶಕಗಳಿಂದ ಅದರ ಶಸ್ತ್ರಚಿಕಿತ್ಸೆಯನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಮಾಡುತ್ತಾರೆ. ಸೂಕ್ಷ್ಮ ದರ್ಶಕದ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಯಲ್ಲಿ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಹೆಚ್ಚಿನ ವೈದ್ಯರು ಅನುಸರಿಸುವಂತಹ ವಿಧಾನದಲ್ಲಿ ಕಿವಿಯ ಅಲೆಯನ್ನು ಹಿಂಬದಿಯಿಂದ 6ರಿಂದ 10 ಸೆಂಟೀಮೀಟರು ಉದ್ದವಾಗಿ ಛೇದಿಸಿ ಅಲೆಯನ್ನು ಮುಂದೆ ಸರಿಸುತ್ತಾರೆ ಅನಂತರ ಕಿವಿಯ ಕೊಳವೆಯನ್ನು ಛೇದಿಸಿ ಒಳಗಡೆ ಇರುವ ಪರದೆಯನ್ನು ಸರಿಪಡಿಸುತ್ತಾರೆ. ಕೊನೆಗೆ ಕಿವಿಯ ಹಿಂದೆ 6ರಿಂದ 10 ಹೊಲಿಗೆ ಹಾಕುತ್ತಾರೆ. ಈ ವಿಧಾನದಲ್ಲಿ ಕಿವಿಯ ಅಲೆಯ ಹಿಂಭಾಗದಲ್ಲಿ ದೊಡ್ಡ ಕಲೆ ಉಳಿಯುತ್ತದೆ. ಮುಂದೆ ಈ ಕಲೆಯಲ್ಲಿ ತುರಿಕೆ, ನೋವು  ಬರುವುದು, ಕಿವಿಯ ಅಲೆ ಮರಗಟ್ಟುವುದು, ಕಿವಿಯ ಆಲಯ ದಿಕ್ಕು ಬದಲಾಗುವುದು, ಆಹಾರ ಜಗಿಯುವಾಗ ಕಿವಿಯ ಮೇಲಿನ ಭಾಗದಲ್ಲಿ ನೋವು ಬರುವುದು ಇಂತಹ ಕೆಲವು ಅಡ್ಡ ಪರಿಣಾಮಗಳು ಆಗುವ ಸಾಧ್ಯತೆಗಳು ಇರುತ್ತವೆ.

ಅಂತರ್ದರ್ಶಕವನ್ನು ಉಪಯೋಗಿಸಿ ಕಿವಿಯ ಪರದೆಯನ್ನು ಸರಿಪಡಿಸುವ ವಿಧಾನದಲ್ಲಿ  ಈ ಮೇಲೆ ತಿಳಿಸಿರುವ ತೊಂದರೆಗಳು ಆಗದಂತೆ ಶಸ್ತ್ರಚಿಕಿತ್ಸೆ ಮಾಡಬಹುದು. ಈ ವಿಧಾನದಲ್ಲಿ ಕಿವಿಯ ಅಲೆಯ ಹಿಂಭಾಗವನ್ನು ಮತ್ತು ಕಿವಿಯ ಕೊಳವೆಯನ್ನು ಛೇದಿಸುವ ಅಗತ್ಯ ಇರುವುದಿಲ್ಲ. ಕಿವಿಯ ಕೊಳವೆಯ ಒಳಗೆ ಎಂಡೋಸ್ಕೋಪ್‌ ಅನ್ನು ಇಟ್ಟು ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಪೊರೆ ತೆಗೆಯಲು 1 ಸೆಂಟಿಮೀಟರ್‌ ಉದ್ದದ ಗಾಯ ಮಾತ್ರ ಸಾಕಾಗುತ್ತದೆ. . ಅದಕ್ಕೆ ಯಾವುದೇ ಹೊಲಿಗೆಯ ಅಗತ್ಯ ಇಲ್ಲದೆ ಅದನ್ನು ಮುಚ್ಚಬಹುದಾಗಿದೆ. ಆದ್ದರಿಂದ ಗಾಯದ ಕಲೆಯ ತೊಂದರೆಯಾಗಲಿ, ಕಿವಿಯ ಅಲೆಯಲ್ಲಿ ಯಾವ ವ್ಯತ್ಯಾಸವಾಗಲಿ ಕಂಡುಬರುವುದಿಲ್ಲ.

Advertisement

ಅಂತರ್ದರ್ಶಕ ವಿಧಾನದ ಶಸ್ತ್ರಚಿಕಿತ್ಸೆಗೆ ತಗಲುವ ಒಟ್ಟು ಸಮಯ ಮತ್ತು ನಂತರದ ನೋವು ಕಡಿಮೆ ಆದ್ದರಿಂದ ರೋಗಿಯ ಚೇತರಿಕೆಯು ಬೇಗನೆ ಆಗುತ್ತದೆ. ಈ ಎರಡು ವಿಧಾನಗಳಲ್ಲಿ ಕಿವಿ ಪರದೆಯ ತೂತು ವಾಸಿಯಾಗಿ ಸೋರುವುದು ನಿಂತು ಕಿವಿ ಕೇಳುವುದು ಉತ್ತಮವಾಗುವ ಸಾಧ್ಯತೆಯು ಸುಮಾರು 85ರಿಂದ 95 ಶೇಕಡಾ ಇರುತ್ತದೆ. ಎಲ್ಲಾ ರೋಗಿಗಳಿಗೆ ಅಂತರ್ದರ್ಶಕದ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲದಿರಬಹುದು. ಆದ್ದರಿಂದ ಈ ವಿಧಾನಕ್ಕೆ ಸರಿಹೊಂದುವಂತಹ ರೋಗಿಯನ್ನು ಆಯ್ಕೆ ಮಾಡುವುದು ವೈದ್ಯರ ನಿರ್ಧಾರವಾಗಿರುತ್ತದೆ. ಆದರೆ ಈ ವಿಧಾನದ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿರುವ ವೈದ್ಯರು ಕಿವಿಯ ಎಲ್ಲಾ ತರದ ಶಸ್ತ್ರಚಿಕಿತ್ಸೆಗಳನ್ನು ಅಂತರ್ದರ್ಶಕದ ಮೂಲಕ ಮಾಡಲು ಪರಿಣತರಾಗಿರುತ್ತಾರೆ.

– ಡಾ| ದೇವಿಪ್ರಸಾದ್‌ ಡಿ., 
ಅಸೋಸಿಯೇಟ್‌ ಪ್ರೊಫೆಸರ್‌
ಇಎನ್‌ಟಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next