Advertisement

ತ್ರಿಶಂಕು ಸ್ಥಿತಿಯಲ್ಲಿ ಎಂಡೋ ಸಂತ್ರಸ್ತ ಕುಟುಂಬಗಳು

01:59 PM Sep 09, 2017 | Karthik A |

ಕಡಬ: ತಮ್ಮದಲ್ಲದ ತಪ್ಪಿಗೆ ಯಾತನೆ ಅನುಭವಿಸುತ್ತಿರುವ ಎಂಡೋ ಸಂತ್ರಸ್ತ ಕುಟುಂಬಗಳು ಈಗ ಇನ್ನೊಂದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಎಂಡೋ ಸಂತ್ರಸ್ತರ ಕೆಲವು ಕುಟುಂಬಗಳಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಎಪಿಎಲ್‌ ಪಡಿತರ ಚೀಟಿಯನ್ನು ಬಿಪಿಎಲ್‌ ಪಡಿತರ ಚೀಟಿಯನ್ನಾಗಿ ಬದಲಾಯಿಸಲು ಹೋಗಿ ಅತ್ತ ಎಪಿಎಲ್‌ ಪಡಿತರ ಚೀಟಿಯೂ ಇಲ್ಲ, ಇತ್ತ ಬಿಪಿಎಲ್‌ ಪಡಿತರ ಚೀಟಿ ಕೂಡ ಇಲ್ಲ ಎನ್ನುವ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಬಗ್ಗೆ ಎಂಡೋ ಸಂತ್ರಸ್ತರ ಕುಟುಂಬ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ನಿವೇದನೆ ಮಾಡಿಕೊಂಡರೂ ಈವರೆಗೆ ಯಾವುದೇ ಉತ್ತರ ಸಿಗದೆ ಸಂಕಟ ಅನುಭವಿಸುತ್ತಿದ್ದಾರೆ. 3 ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಅವರ ನೇತೃತ್ವದಲ್ಲಿ ಎಂಡೋ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ ಫಲವಾಗಿ ಜಿಲ್ಲಾಧಿಕಾರಿಯವರು ಪ್ರತಿಭಟನೆಯ 15 ದಿನದ ಬಳಿಕ ಕೊಕ್ಕಡದಲ್ಲಿ ಎಂಡೋ ಸಲ್ಫಾನ್‌ ವಿರೋಧಿ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ಭರವಸೆ ನೀಡಿರುವ ಜಿಲ್ಲಾಧಿಕಾರಿಯವರು ಈಗಾಗಲೇ ಗುರುತಿಸಲಾಗಿರುವ 3,600 ಎಂಡೋ ಸಂತ್ರಸ್ತರ ಕುಟುಂಬಗಳ ಪೈಕಿ 600 ಕುಟುಂಬಗಳು ಇನ್ನೂ ಎಪಿಎಲ್‌ ಪಡಿತರ ಚೀಟಿ ಹೊಂದಿರುವುದರಿಂದ ಅವುಗಳನ್ನು ತತ್‌ಕ್ಷಣ ಬಿಪಿಎಲ್‌ ಪಡಿತರ ಚೀಟಿಗಳನ್ನಾಗಿ ಬದಲಾಯಿಸಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದೇ ಸ್ಥಳದಲ್ಲಿ ಅಧಿಕಾರಿಗಳು ಎಪಿಎಲ್‌ ಕಾರ್ಡ್‌ ಹೊಂದಿರುವ ಎಂಡೋ ಸಂತ್ರಸ್ತರ ಕುಟುಂಬದವರು ಕೂಡಲೇ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ನೀಡುವಂತೆ ಸೂಚನೆ ನೀಡಿದ್ದರು. ಅದನ್ನು ನಂಬಿದ ಅನೇಕ ಕುಟುಂಬಗಳು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ನೀಡಿ ಹಳೆಯ ಎಪಿಎಲ್‌ ಕಾರ್ಡ್‌ನ್ನು ರದ್ದುಗೊಳಿಸಿ ತಿಂಗಳು ಮೂರಾದರೂ ಇನ್ನೂ ಹೊಸ ಬಿಪಿಎಲ್‌ ಕಾರ್ಡ್‌ ಸಿಗದೆ ಕಂದಾಯ ಇಲಾಖೆ, ಗ್ರಾ.ಪಂ. ಕಚೇರಿಗಳಿಗೆ ಎಡತಾಕುತ್ತಿದ್ದಾರೆ.

ಈ ಬಗ್ಗೆ ರಾಮಕುಂಜ ಗ್ರಾಮದ ಸಂಪ್ಯಾಡಿ ಪಟ್ಟೆಮನೆ ಬಾಲಕೃಷ್ಣ ಗೌಡ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ನನ್ನ ಮಗು ಎಂಡೋ ಪೀಡಿತನಾಗಿ ಮಲಗಿರುವ ಸ್ಥಿತಿಯಲ್ಲಿ ಮನೆಯಲ್ಲೇ ಇದೆ. ಜಿಲ್ಲಾಧಿಕಾರಿಯವರ ಆದೇಶದಂತೆ ನನ್ನ ಹಳೆಯ ಎಪಿಎಲ್‌ ಕಾರ್ಡ್‌ನ° ಬದಲಾಯಿಸಿ ಬಿಪಿಎಲ್‌ ಕಾರ್ಡ್‌ ಒದಗಿಸುವಂತೆ ಅರ್ಜಿ ಸಲ್ಲಿಸಿರುತ್ತೇನೆ. ಬಳಿಕ ಪುತ್ತೂರಿನ ಆಹಾರ ಇಲಾಖಾಧಿಯವರನ್ನು ಭೇಟಿ ಮಾಡಿದಾಗ ಅವರು ನನ್ನ ಹಳೆಯ ಕಾರ್ಡ್‌ನ್ನು ರದ್ದುಗೊಳಿಸಿ ರಾಮಕುಂಜ ಗ್ರಾ.ಪಂ.ನಲ್ಲಿ ಅರ್ಜಿ ನೀಡಲು ಸಲಹೆ ನೀಡಿದರು. ಅದರಂತೆ ಗ್ರಾ.ಪಂ.ನಲ್ಲಿ ಅರ್ಜಿ ಪಡೆದು ನಮ್ಮ ಕುಟುಂಬದ ಸದಸ್ಯರ ಹೆಬ್ಬೆಟ್ಟು ಗುರುತು ತೆಗೆದುಕೊಂಡರು. ಆದರೆ ಎಂಡೋ ಪೀಡಿತ ಮಗುವಿನ ಹೆಬ್ಬೆಟ್ಟು ಹೊಂದಿಕೆಯಾಗಲೇ ಇಲ್ಲ. ಬಳಿಕ ಕಡಬ ತಹಶೀಲ್ದಾರ್‌ ಕಚೇರಿಗೆ ಮಗುವನ್ನು ಕರೆದುಕೊಂಡು ಹೋದರೂ ಅಲ್ಲಿ ಕೂಡ ಹೆಬ್ಬೆಟ್ಟು ಗುರುತು ಹೊಂದಿಕೆಯಾಗಿಲ್ಲ. ಕಣ್ಣಿನ ಗುರುತು ಕೂಡ ಹೊಂದಿಕೆಯಾಗಿಲ್ಲ. ನಡೆಯಲಾರದ ಮಗುವನ್ನು ಎಲ್ಲ ಕಡೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗ ನನ್ನ ಕುಟುಂಬಕ್ಕೆ ಇದ್ದ ಎಪಿಎಲ್‌ ಕಾರ್ಡೂ ಇಲ್ಲ. ಬರಬೇಕಿದ್ದ ಬಿಪಿಎಲ್‌ ಕೂಡ ಆಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹಲವು ಕುಟುಂಬಗಳಿವೆ
ಇದು ಬಾಲಕೃಷ್ಣ ಅವರ ಒಬ್ಬರ ಸಮಸ್ಯೆ ಅಲ್ಲ. ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸಲು ಹೋದ ಹಲವಾರು ಎಂಡೋ ಸಂತ್ರಸ್ತರ ಪಾಡು ಇದೇ ಆಗಿದೆ. ರಾಮಕುಂಜ, ಕೊಯಿಲ ಗ್ರಾಮದಲ್ಲಿ 3 ಕುಟುಂಬ ಇಂತಹ ಪರಿಸ್ಥಿತಿಯಲ್ಲಿ ಇದೆ. ಇನ್ನಷ್ಟು ಕುಟುಂಬಗಳು ಈ ಪಟ್ಟಿಯಲ್ಲಿವೆ. ಈ ಸಮಸ್ಯೆಗೆ ಜಿಲ್ಲಾಧಿಕಾರಿಯವರ ಮೌಖೀಕ ಆದೇಶವೇ ಕಾರಣ. ಲಿಖೀತ ಆದೇಶ ನೀಡಿದರೆ ಅಧಿಕಾರಿಗಳು ಏನಾದರೂ ಕ್ರಮ ಕೈಗೊಳ್ಳಲು ಸಾಧ್ಯ. ಇನ್ನಾದರೂ ಜಿಲ್ಲಾಧಿಕಾರಿಯವರು ಎಂಡೋ ಸಂತ್ರಸ್ತ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ಒದಗಿಸುವಲ್ಲಿ ಸೂಕ್ತ ಕ್ರಮ ಜರಗಿಸಬೇಕು ಎಂದು ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಅವರು ಆಗ್ರಹಿಸಿದ್ದಾರೆ.

Advertisement

ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆ ಎದುರಾಗಿರಬಹುದು. ಅದನ್ನು ಯಾವ ರೀತಿ ಬಗೆಹರಿಸಬಹುದು ಎನ್ನುವುದನ್ನು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಜಾನ್‌ಪ್ರಕಾಶ್‌ ರೋಡ್ರಿಗಸ್‌, ಕಡಬ ತಹಶೀಲ್ದಾರ್‌

– ನಾಗರಾಜ್‌ ಎನ್‌.ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next