ಧಾರವಾಡ: ಸಂತತ ಟ್ರಸ್ಟ್ ವತಿಯಿಂದ 38 ನಿಮಿಷಗಳ\ ಎಂದೆಂದಿಗೂ ಕಿರುಚಿತ್ರ ನಿರ್ಮಿಸಿದ್ದು, ಈ ಚಿತ್ರತಂಡಕ್ಕೆ ಯಶಸ್ವಿ ಸಿಗಲಿ ಎಂದು ರಂಗಾಯಣ ನಿರ್ದೇಶಕ ರಮೇಶ ಪರವೀನಾಯ್ಕ ಹೇಳಿದರು. ನಗರದ ರಂಗಾಯಣದಲ್ಲಿ ನಾಗರಾಜ ಪಾಟೀಲ ಅವರ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಈ ಕಿರುಚಿತ್ರದ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಹಾಗೂ ಮಂಗಳೂರಿನಲ್ಲಿ ಚಿತ್ರರಂಗ ಚಿಗುರೊಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಸಂತತ ತಂಡ ಅವಕಾಶ ಬಳಸಿಕೊಂಡು ಬರುವ ದಿನಗಳಲ್ಲಿ ಇನ್ನೂ ಉತ್ತಮ ಪ್ರಯತ್ನ ಮಾಡಲಿ ಎಂದು ಹಾರೈಸಿದರು. ಕಿರುಚಿತ್ರದ ನಾಯಕ ವಿನಯ ಯು.ಜೆ. ಮಾತನಾಡಿ, ಇದೊಂದು ಸುಂದರ ಪ್ರೇಮಕಥೆ. ಎರಡು ಪಾತ್ರಗಳ ಸುತ್ತ ಸುತ್ತುವ, ಸಾಧಾರಣ ಕಥೆಯಾದರೂ ಇದರ ಚಿತ್ರಕಥೆ ವಿಶಿಷ್ಟವಾಗಿದೆ.
ಈ ಕಿರುಚಿತ್ರ ಸಂಪೂರ್ಣ ಹುಬ್ಬಳ್ಳಿ-ಧಾರವಾಡದಲ್ಲಿ ನಿರ್ಮಾಣವಾಗಿದ್ದು, ಸಂಭಾಷಣೆ, ದೃಶ್ಯ, ಹಾಡು ಹೀಗೆ ಪ್ರತಿಯೊಂದು ಹೊಸತನವಿದೆ. ಸುಮಾರು ಇಪ್ಪತ್ತು ಕಲಾವಿದರು ಅಭಿನಯಿಸಿದ್ದು, ಮೂವತ್ತು ತಂತ್ರಜ್ಞರು ಕೆಲಸ ಮಾಡಿದ್ದಾರೆ ಎಂದರು. ನಿರ್ದೇಶಕ ನಾಗರಾಜ ಪಾಟೀಲ, ಸಂಯೋಜಕ ಮಾರ್ತಾಂಡಪ್ಪ ಕತ್ತಿ ಇದ್ದರು. ನಂತರ ಚಿತ್ರ ಪ್ರದರ್ಶನ ಜರುಗಿತು.
ಇದನ್ನೂ ಓದಿ:ಖಾಸಗಿ ಕನ್ನಡ ಶಾಲೆಗಳಿಗೆ ವೇತನಾನುದಾನ ನೀಡಿ
ಕಿರುಚಿತ್ರದ ಬಗ್ಗೆ ಒಂದಿಷ್ಟು : ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದು, ಮಹಾನಂದಾ ಗೋಸಾವಿ, ಸುಜೇಂದ್ರ ಕುಲಕರ್ಣಿ, ಸಾವನ್ ಸಿಂಗ್ ಮತ್ತು ಪ್ರಸನ್ನ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಧಾರವಾಡದ ಐಶ್ವರ್ಯ ಸಾಲಿಮಠ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ ಉದಯ ಹಬೀಬ್ ಸಂಕಲನ, ಛಾಯಾಗ್ರಹಣ ಶಶಿಫ್ ನದಾಫ್, ಹಿನ್ನೆಲೆ ಸಂಗೀತ ಧನಂಜಯ ಕೀಸ್, ಧ್ವನಿಗ್ರಹಣ ಜಯಕೃಷ್ಣ, ಸಹಾಯಕ ನಿರ್ದೇಶನಚೇತನ್, ನಿರ್ದೇಶನ ತಂಡ ಅಶೋಕ ಹಡಪದ, ಆದರ್ಶ ಅಗಡಿ, ನಿಧಿ ಕುಲಕರ್ಣಿ, ಸಾಗರ ಘೋರ್ಪಡೆ ನಿರ್ವಹಿಸಿದರೆ, ನೃತ್ಯ ಸುನೀಲ ಅರಳಿಕಟ್ಟಿ, ಕಲೆ ರಾಮಚಂದ್ರ ಶೆರೇಕಾರ ಟೈಟಲ್ ಡಿಸೈನ್ ಶಾಶ್ವಥ ಹೆಗಡೆ ಕೆಲಸ ಮಾಡಿದ್ದಾರೆ.