Advertisement

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

01:54 AM Oct 24, 2021 | Team Udayavani |

ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ ಸರಕಾರ 7 ದಿನಗಳ “ಕನ್ನಡಕ್ಕಾಗಿ ನಾವು’ ಅಭಿಯಾನ ಆರಂಭಿಸುತ್ತಿದೆ. ಈ ಸಂದರ್ಭ ದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ನೆಲ ಎದುರಿಸುತ್ತಿರುವ 7 ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಉದಯವಾಣಿ ಸರಣಿ ಇಂದಿನಿಂದ…

Advertisement

ಬೆಂಗಳೂರು: “ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಂತೆ ಹಾಡಬೇಕೇ ಅಥವಾ ಸಿ. ಅಶ್ವತ್ಥ್ ಸಂಯೋಜಿಸಿರುವಂತೆ ಹಾಡಬೇಕೇ…?

15 ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದಕ್ಕೆ ಉತ್ತರ ಹುಡುಕಲು ಈ ಹಿಂದೆ ಜಿಎಸ್ಸೆಸ್‌, ಚನ್ನವೀರ ಕಣವಿ ಮತ್ತು ವಸಂತ ಕನಕಾಪುರ ನೇತೃತ್ವದಲ್ಲಿ 3 ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ನೀಡಿರುವ ವರದಿ ಇದುವರೆಗೆ ಜಾರಿಯಾಗಿಲ್ಲ. ಈ ರಾಜ್ಯೋತ್ಸವ ವೇಳೆಯಲ್ಲಾದರೂ ಸರಕಾರ ಈ ನಾಡಗೀತೆ ವಿವಾದಕ್ಕೆ ಇತಿಶ್ರೀ ಹಾಡಲಿ ಎಂಬುದು ಜನತೆಯ ಆಶಯ.

ಇದರ ನಡುವೆ ಈಗ ಸರಕಾರ ಹಿರಿಯ ಗಾಯಕಿ ಎಚ್‌.ಆರ್‌. ಲೀಲಾವತಿ ಅವರ ನೇತೃತ್ವದಲ್ಲಿ 17 ಸದಸ್ಯರ ಸಮಿತಿಯನ್ನು ರಚಿಸಿದ್ದು, ಇದು ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನೇ ಒಪ್ಪಿಕೊಂಡು ಸರಕಾರಕ್ಕೆ ವರದಿ ನೀಡಿದೆ. ಇದನ್ನು ಮುಖ್ಯಮಂತ್ರಿಗಳಿಗೂ ನೀಡಲಾಗಿದ್ದು, ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಪೂರ್ಣ ಗೀತೆಯನ್ನು ನಾಡಗೀತೆಯಾಗಿ ಹಾಡಿಸುವುದಾದರೆ ಸಿ. ಅಶ್ವತ್ಥ್ ಅವರ ರಾಗ ಸಂಯೋಜನೆ; ಈಗಿರುವಂತೆ ಅರ್ಧ ಹಾಡಿಸುವುದಾದರೆ ಮೈಸೂರು ಅನಂತಸ್ವಾಮಿ  ರಾಗಸಂಯೋಜನೆಯನ್ನು ಒಪ್ಪಿಕೊಳ್ಳಬಹುದು ಎಂಬ ರೀತಿಯಲ್ಲಿ ವರದಿ ಕೊಟ್ಟಿದ್ದೆವು. ಆದರೆ  ಸರಕಾರ  ಪೂರ್ಣವಾಗಿ ಹಾಡಿಸಬೇಕೋ ಅಥವಾ ಅರ್ಧ ಹಾಡಿಸಬೇಕೋ ಎಂಬ ಬಗ್ಗೆ  ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ ಹಿಂದಿನ ಸಮಿತಿಗಳಲ್ಲಿದ್ದ ಹಿಂದಿನ ಮೂರೂ ಸಮಿತಿಗಳಲ್ಲಿದ್ದ ವೈ.ಕೆ. ಮುದ್ದುಕೃಷ್ಣ.

Advertisement

ಇದನ್ನೂ ಓದಿ:ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಅನಂತಸ್ವಾಮಿ ಸಂಯೋಜನೆಗೆ ಯಾಕೆ ವಿರೋಧ?
ಮೈಸೂರು ಅನಂತಸ್ವಾಮಿ ಪೂರ್ಣ ಗೀತೆಗೆ ರಾಗಸಂಯೋಜನೆ ಮಾಡಿಲ್ಲ. ಸಿ. ಅಶ್ವತ್ಥ್ ಪೂರ್ಣ ಗೀತೆಗೆ ರಾಗ ಸಂಯೋಜನೆ ಮಾಡಿದ್ದಾರೆ. ಇದು ಸರಳವಾಗಿದೆ, ಇದನ್ನೇ ಬಳಸಿಕೊಳ್ಳಿ ಎನ್ನುತ್ತಾರೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ. ಈ ಬಗ್ಗೆ ಅವರು ಸಿಎಂ  ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್‌ ಜತೆ  ಚರ್ಚಿಸಿದ್ದಾರೆ.

ನನಗೆ ವ್ಯಥೆಯಾಗುತ್ತಿದೆ ಮೈಸೂರು ಅನಂತಸ್ವಾಮಿ ರಾಗಸಂಯೋಜನೆ ಮಾಡಿರುವ ಗೀತೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಈಗ ಸರಕಾರ ನೇಮಕ ಮಾಡಿರುವ ಸಮಿತಿಯ ಅಧ್ಯಕ್ಷೆ ಎಚ್‌.ಆರ್‌. ಲೀಲಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1986ರಿಂದ ಸುಗಮ ಸಂಗೀತ ಅಕಾಡೆಮಿಯಲ್ಲಿ ಈ ಗೀತೆಯನ್ನು ಮೈಸೂರು ಅನಂತಸ್ವಾಮಿ ಹಾಡುತ್ತಿದ್ದರು. ನಾಡಗೀತೆ ಆಗುವ ಮೊದಲೇ ಇದನ್ನು ಸಂಪೂರ್ಣವಾಗಿ ಹಾಡಿ ಮನೆಮಾತಾಗುವಂತೆ ಮಾಡಿದ್ದರು. ಈಗ ವಿರೋಧ ಮಾಡುವುದು ಸರಿಯಲ್ಲ ಎಂದು  ಉದಯವಾಣಿಗೆ ಅವರು ತಿಳಿಸಿದ್ದಾರೆ.

ಎಲ್ಲ ಸದಸ್ಯರು ಧಾಟಿಯ ಬಗ್ಗೆ ಚರ್ಚೆ ನಡೆಸಿ ಮೈಸೂರು ಅನಂತಸ್ವಾಮಿ ಧಾಟಿಯನ್ನು ಅಂತಿಮಗೊಳಿಸಿದ್ದಾರೆ. ಸರಕಾರ ಇದಕ್ಕೆ ಮನ್ನಣೆ ನೀಡಲಿದೆ ಎಂಬ ವಿಶ್ವಾಸ ವಿದೆ. ಯಾರೋ ಒಂದಿಬ್ಬರು ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಸರಕಾರ ಅದಕ್ಕೆ ಕಿವಿಗೊಡಬಾರದು.
-ಎಚ್‌.ಆರ್‌. ಲೀಲಾವತಿ,  ಸಮಿತಿ ಅಧ್ಯಕ್ಷೆ

ಸರಕಾರ ಈ ಹಿಂದೆ ಅ. 2ರಂದು ಧಾಟಿ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಆದರೆ ಈವರೆಗೂ ತೆಗೆದುಕೊಂಡಿಲ್ಲ. ಆದಷ್ಟು ಬೇಗ ಸರಕಾರ ತನ್ನ ನಿರ್ಧಾರ ಪ್ರಕಟಿಸ ಬೇಕು.
 -ಬಿ.ಆರ್‌. ಲಕ್ಷ್ಮಣ ರಾವ್‌,
ಸರಕಾರದ ಸಮಿತಿಯ ಸದಸ್ಯ

ನಾಡಗೀತೆ ಧಾಟಿ ಬಗ್ಗೆ 17 ಮಂದಿ ಸದಸ್ಯರ ಆಯ್ಕೆ ಸಮಿತಿ ನೀಡಿರುವ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
-ಎಸ್‌. ರಂಗಪ್ಪ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು.

 -ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next