ನವದೆಹಲಿ:ದೆಹಲಿ ಮತ್ತು ಉತ್ತರಪ್ರದೇಶ ಗಡಿಯಾದ ಗಾಜಿಪುರದಲ್ಲಿ ರೈತರು ಕಳೆದ 59 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಉತ್ತರಪ್ರದೇಶದ ಗಾಜಿಪುರ್ ಜಿಲ್ಲಾಡಳಿತ ಗುರುವಾರ(ಜನವರಿ 28, 2021) ಆದೇಶ ನೀಡಿದ್ದು, ಇಂದು ರಾತ್ರಿಯೊಳಗೆ ಪ್ರತಿಭಟನಾಕಾರರನ್ನು ವಾಪಸ್ ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸತತ 5ನೇ ದಿನವೂ ಷೇರುಪೇಟೆ ಭಾರೀ ಪತನ: 536 ಅಂಕ ಕುಸಿದ ಸೆನ್ಸೆಕ್ಸ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನವೆಂಬರ್ 2ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಗಾಜಿಪುರ್ ಗಡಿಯನ್ನು ಬಂದ್ ಮಾಡಲಾಗಿತ್ತು.
ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವ ರೈತರ ವಿರುದ್ಧ ಉತ್ತರಪ್ರದೇಶ ಸರ್ಕಾರ ಕಠಿಣ ನಿಲುವು ತಳೆದಿದೆ. ನಾವು ಪ್ರತಿಭಟನಾಕಾರರನ್ನು ಯಾವುದೇ ಬಲವನ್ನು (ಸೇನೆ, ಪೊಲೀಸ್) ಬಳಸಿಕೊಂಡಿಲ್ಲ. ಪ್ರತಿಭಟನಾಕಾರರಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳು, ಹಿರಿಯರು ಇದ್ದು ಅವರನ್ನು ಮನೆಗಳಿಗೆ ಕಳುಹಿಸುತ್ತಿದ್ದೇವೆ ಎಂದು ಬಾಘಪತ್ ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮಂಗಳವಾರ ರೈತರು ಬ್ಯಾರಿಕೇಡ್ ಮುರಿದು ಟ್ರ್ಯಾಕ್ಟರ್ ರಾಲಿ ಆರಂಭಿಸಿದ್ದರು. ಸೂಚಿತ ಮಾರ್ಗಗಳಲ್ಲಿ ರೈತರು ಟ್ರ್ಯಾಕ್ಟರ್ ಮೂಲಕ ತೆರಳಿದ ನಂತರ ವಿವಿಧೆಡೆಯಿಂದ ರೈತರು ಆಗಮಿಸಿದ್ದರು. ದೆಹಲಿಯಲ್ಲಿ ಪೊಲೀಸರು ರೈತರ ರಾಲಿಯನ್ನು ತಡೆಯಲು ಯತ್ನಿಸಿದಾಗ ಘರ್ಷಣೆ ಆರಂಭವಾಗಿ ನಂತರ ಹಿಂಸಾಚಾರಕ್ಕೆ ತಿರುಗಿತ್ತು. ಗಣರಾಜ್ಯೋತ್ಸವ ದಿನಾಚರಣೆಯಂದು ಕೆಂಪುಕೋಟೆಗೆ ನುಗ್ಗಿದ ರೈತರು ಸಿಖ್ ಧರ್ಮದ ಹಾಗೂ ರೈತರ ಧ್ವಜವನ್ನು ಹಾರಿಸಿದ್ದರು.