Advertisement
ಕಾರ್ಕಳ ಪುರಸಭಾ ವ್ಯಾಪ್ತಿಯ ಕಾವೇರಡ್ಕ ಅಯೋಧ್ಯಾ ನಗರದ ದುರ್ಗಾ ಮತ್ತು ಕಾರ್ಕಳ ನಗರವನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಯಾಗಿರುವ ಈ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದು 18 ವರ್ಷದ ಹಿಂದೆ ಅಭಿವೃದ್ಧಿಗೊಂಡಿದ್ದು, ಬಿಟ್ಟರೆ ಅನಂತರದಲ್ಲಿ ರಸ್ತೆಯ ಅಭಿವೃದ್ಧಿ ನಡೆದಿರಲಿಲ್ಲ. 2020ರ ಜನವರಿ ತಿಂಗಳಲ್ಲಿ ಟೆಂಡರ್ ಆಗಿತ್ತು. ಅದೇ ವರ್ಷದ ಮೇ ತಿಂಗಳಿನಲ್ಲಿ ಮಂಗಳೂರು ಭಾಗದ ಗುತ್ತಿಗೆದಾರರು ರಸ್ತೆ ನಿರ್ಮಾಣದ ಕಾಮಗಾರಿ ವಹಿಸಿಕೊಂಡಿದ್ದರು. ಕಾರಣಾಂತರಗಳಿಂದ ರಸ್ತೆ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿತ್ತು. ಇಲ್ಲಿ ವಾಹನ ಸಂಚರಿಸುವ ವೇಳೆ ಸರಣಿ ಅಪಘಾತಗಳು ನಡೆಯುತ್ತಿದ್ದವು.ಇಲ್ಲಿಯ ರಸ್ತೆ ವಿದ್ಯಾರ್ಥಿಗಳ, ಸ್ಥಳಿಯ ನಾಗರಿಕರ ಪ್ರಾಣಕ್ಕೆ ಸಂಚಕಾರ ತರುತ್ತಿತ್ತು. ಇದರಿಂದ ರಸ್ತೆ ಅಭಿವೃದ್ಧಿಗೆ ಪುರಸಭೆ ಮುಂದಾಗಿತ್ತು. ಅನಂತರ ರಸ್ತೆ ಅಭಿವೃದ್ಧಿಗೆಂದು ಜಲ್ಲಿಕಲ್ಲು ಹಾಕಿದ್ದರೂ ಡಾಮರು ಕಾಮಗಾರಿ ಆರಂಭ ವಾಗಿರಲಿಲ್ಲ. ಸ್ಥಳೀಯರು ಸತತವಾಗಿ ಪುರಸಭೆ, ಗುತ್ತಿಗೆದಾರರಿಗೆ ಕರೆ ಮಾಡಿ ದರೂ ಪ್ರಯೋಜನವಾಗಿರಲಿಲ್ಲ. ಘಟನೆಗೆ ಪುರಸಭೆ, ಗುತ್ತಿಗೆೆದಾರರನ್ನು ಹೊಣೆಯಾಗಿಸಿ ಸ್ಥಳೀಯರು ಕಾನೂನು ಹೋರಾಟಕ್ಕೂ ಮುಂದಾಗಿದ್ದರು.
ಪುರಸಭೆ ವಾರ್ಡ್-11ರಲ್ಲಿ ಇಂತಹದ್ದೊಂದು ಶೋಚನೀಯ ಸ್ಥಿತಿ ಇರುವ ಕುರಿತು ಎ.10ರಂದು ಉದಯವಾಣಿ ವರದಿಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. 6 ತಿಂಗಳಿಂದ ಸಂಚಾರದಲ್ಲಿ ಆಗುತ್ತಿರುವ ತೊಂದರೆ ಕುರಿತು ಆಡಳಿತದ ಗಮನ ಸೆಳೆದಿತ್ತು. ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು ಗುತ್ತಿಗೆದಾರರ ಗಮನಕ್ಕೆ ಈ ಕೂಡಲೇ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಇದರ ಫಲಶ್ರುತಿ ಎಂಬಂತೆ ರಸ್ತೆ ಡಾಮರುಗೊಳ್ಳುತ್ತಿದೆ. ಎರಡು ದಿನಗಳಿಂದ ಕೆಲಸ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಕಾಮಗಾರಿ ಮುಕ್ತಾಯಗೊಂಡು ಸುಗಮ ಸಂಚಾರಕ್ಕೆ ರಸ್ತೆ ತೆರೆದುಕೊಳ್ಳಲಿದೆ.