Advertisement

ಮುರಳಿ ವಿಜಯ್‌ ಶತಕ:ಅಭ್ಯಾಸ ಪಂದ್ಯ ನೀರಸ ಡ್ರಾ

06:00 AM Dec 02, 2018 | Team Udayavani |

ಸಿಡ್ನಿ: ಅಭ್ಯಾಸ ಪಂದ್ಯದಲ್ಲಿ ಆರಂಭಕಾರ ಮುರಳಿ ವಿಜಯ್‌ ಆತ್ಮವಿಶ್ವಾಸಭರಿತ ಶತಕವೊಂದನ್ನು ಬಾರಿಸಿ ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕೆ ಅಣಿಯಾಗಿದ್ದಾರೆ. ಜತೆಗಾರ ಕೆ.ಎಲ್‌. ರಾಹುಲ್‌ ಕೂಡ ಅರ್ಧ ಶತಕವೊಂದನ್ನು ಹೊಡೆದು ಫಾರ್ಮ್ಗೆ ಮರಳಿ8ದ ಸೂಚನೆ ನೀಡಿದ್ದಾರೆ. ಇವರಿಬ್ಬರ ಸಾಹಸದಿಂದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 2ಕ್ಕೆ 211 ರನ್‌ ಗಳಿಸಿದ ವೇಳೆ ಪಂದ್ಯಕ್ಕೆ ಡ್ರಾ ಮುದ್ರೆ ಬಿತ್ತು.

Advertisement

ಮೊದಲ ಸರದಿಯಲ್ಲಿ ಬ್ಯಾಟಿಂಗಿಗೆ ಇಳಿಯದಿದ್ದ ವಿಜಯ್‌ ಆಕ್ರಮಣಕಾರಿ ಆಟವಾಡಿ 132 ಎಸೆತಗಳಿಂದ 129 ರನ್‌ ಬಾರಿಸಿದರು (16 ಬೌಂಡರಿ, 5 ಸಿಕ್ಸರ್‌). ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್‌ ಮಾಡಿ ನಿರಾಸೆ ಮೂಡಿಸಿದ್ದ ರಾಹುಲ್‌ 98 ಎಸೆತ ಎದುರಿಸಿ 62 ರನ್‌ ಹೊಡೆದರು (8 ಬೌಂಡರಿ, 1 ಸಿಕ್ಸರ್‌).

ಆದರೆ ಭಾರತ ಬೌಲಿಂಗ್‌ ಮಾತ್ರ ಸಂಪೂರ್ಣವಾಗಿ ಲಯ ಕಳೆದುಕೊಂಡಂತಿತ್ತು. ಕ್ರಿಕೆಟ್‌ ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 544 ರನ್‌ ಪೇರಿಸಿದ್ದೇ ಇದಕ್ಕೆ ಸಾಕ್ಷಿ. ಆತಿಥೇಯರಿಗೆ ಕಡಿವಾಣ ಹಾಕಲು ಭಾರತ ಒಟ್ಟು 10 ಮಂದಿಯನ್ನು ಬೌಲಿಂಗ್‌ ದಾಳಿಗೆ ಇಳಿಸಿತ್ತು. ಹೆಚ್ಚಿನ ಯಶಸ್ಸು ಕಂಡವರು ಮೊಹಮ್ಮದ್‌ ಶಮಿ (97ಕ್ಕೆ 3). ಅಶ್ವಿ‌ನ್‌ 2 ವಿಕೆಟಿಗಾಗಿ 122 ರನ್‌ ಬಿಟ್ಟುಕೊಟ್ಟರು. ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ವಿರಾಟ್‌ ಕೊಹ್ಲಿ ತಲಾ ಒಂದು ವಿಕೆಟ್‌ ಉರುಳಿಸಿದರು. ಆದರೆ ಸಿಡ್ನಿ ಟ್ರ್ಯಾಕ್‌ ಬೌಲರ್‌ಗಳಿಗೆ ಯಾವುದೇ ರೀತಿಯ ನೆರವು ನೀಡುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

2 ಶತಕದ ಜತೆಯಾಟ
186 ರನ್ನುಗಳ ಹಿನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಮುರಳಿ ವಿಜಯ್‌-ಲೋಕೇಶ್‌ ರಾಹುಲ್‌ ಉತ್ತಮ ಅಡಿಪಾಯ ನಿರ್ಮಿಸಿದರು. 30.4 ಓವರ್‌ಗಳ ತನಕ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಈ ಜೋಡಿ ಮೊದಲ ವಿಕೆಟಿಗೆ 109 ರನ್‌ ಪೇರಿಸಿತು. ಈ ಹಂತದಲ್ಲಿ ರಾಹುಲ್‌ ವಿಕೆಟ್‌ ಉರುಳಿತು.

ಬಳಿಕ ಹನುಮ ವಿಹಾರಿ ಅವರನ್ನು ಕೂಡಿಕೊಂಡ ವಿಜಯ್‌ ಆಕ್ರಮಣಕಾರಿ ಬ್ಯಾಟಿಂಗಿಗೆ ಮುಂದಾದರು. 2ನೇ ವಿಕೆಟಿಗೆ ಮತ್ತೂಂದು ಶತಕದ ಜತೆಯಾಟ ದಾಖಲಾಯಿತು (102 ರನ್‌). ವಿಜಯ್‌ ಔಟಾದೊಡನೆ ಪಂದ್ಯವನ್ನು ಕೊನೆಗೊಳಿಸಲಾಯಿತು. ಆಗ ವಿಹಾರಿ 15 ರನ್‌ ಮಾಡಿ ಅಜೇಯರಾಗಿದ್ದರು.

Advertisement

ಹ್ಯಾರಿ ನೀಲ್ಸನ್‌ ಶತಕ
ಆತಿಥೇಯರ ಇನ್ನಿಂಗ್ಸ್‌ ಬೆಳೆಸುವಲ್ಲಿ ಕೀಪರ್‌ ಹ್ಯಾರಿ ನೀಲ್ಸೆನ್‌ ಅವರ ಶತಕದ ಆಟ ಪ್ರಮುಖ ಪಾತ್ರ ವಹಿಸಿತು. 56 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ನೀಲ್ಸೆನ್‌ 170 ಎಸೆತಗಳಿಂದ ಭರ್ತಿ 100 ರನ್‌ ಹೊಡೆದರು (9 ಬೌಂಡರಿ). ಆರನ್‌ ಹಾರ್ಡಿ 86, ಕೆಳ ಕ್ರಮಾಂಕದ ಡೇನಿಯಲ್‌ ಫಾಲಿನ್ಸ್‌ 43, ಲ್ಯೂಕ್‌ ರಾಬಿನ್ಸ್‌ ಅಜೇಯ 38, ಜಾಕ್ಸನ್‌ ಕೋಲ್‌ಮಾÂನ್‌ 36 ರನ್‌ ಗಳಿಸಿದರು. ಕ್ರಿಕೆಟ್‌ ಆಸ್ಟ್ರೇಲಿಯ 6ಕ್ಕೆ 356 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ-358 ಮತ್ತು 2 ವಿಕೆಟಿಗೆ 211 (ವಿಜಯ್‌ 129, ರಾಹುಲ್‌ 62). ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌-544 (ನೀಲ್ಸೆನ್‌ 100, ಹಾರ್ಡಿ 86, ಶಾರ್ಟ್‌ 74, ಬ್ರಿಯಾಂಟ್‌ 62, ಶಮಿ 97ಕ್ಕೆ 3, ಅಶ್ವಿ‌ನ್‌ 122ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next