ಬೆಂಗಳೂರು: ನಾಲ್ಕು ದಿನಗಳ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದ್ದು, ಸರ್ಕಾರ ಮತ್ತು ಸಾರಿಗೆ ನೌಕರರ ಸಂಘರ್ಷಕ್ಕೆ ತಾತ್ಕಾಲಿಕ ಸಮಾಪ್ತಿ ದೊರಕಿದೆ.
ಫ್ರೀಡಂ ಪಾರ್ಕ್ ನಲ್ಲಿ ಈ ಕುರಿತು ಘೋಷಣೆ ಹೊರಡಿಸಿದ ಕೋಡಿಹಳ್ಳಿ ಚಂದ್ರಶೇಖರ್, 10 ಬೇಡಿಕೆಗಳಲ್ಲಿ ಸರ್ಕಾರ 9 ಅನ್ನು ಈಡೇರಿಸಿದೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಯೊಂದೇ ಬಾಕಿ ಉಳಿದಿದೆ. ಇದರ ಈಡೇರಿಕೆಗಾಗಿ ಸರ್ಕಾರಕ್ಕೆ 3 ತಿಂಗಳ ಗಡುವು ನೀಡಲಾಗಿದೆ. ಒಂದು ವೇಳೆ 3 ತಿಂಗಳೊಳಗಾಗಿ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದಿದ್ದರೇ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾತ್ರವಲ್ಲದೆ ರಾಜ್ಯಾದ್ಯಂತ ಮುಷ್ಕರವನ್ನು ವಾಪಾಸ್ ಪಡೆಯಲಾಗಿದ್ದು, ನಾಳೆಯಿಂದ ಎಲ್ಲಾ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಘೋಷಣೆ ಹೊರಡಿಸಿದ್ದಾರೆ.
ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನಕ್ಕೆ ಭಾನುವಾರ (ಡಿ.13) ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದು ಸೋಮವಾರವೂ ಮುಷ್ಕರ ಮುಂದುವರೆಸಿದ್ದರು.
ಇದರ ಬೆನ್ನಲ್ಲೆ ನೌಕರರ 9 ಬೇಡಿಕೆ ಈಡೇರಿಸಲು ಸರ್ಕಾರ ಬದ್ದ. ಈ ಸಂಬಂಧ ಲಿಖಿತವಾಗಿಯೂ ಭರವಸೆ ನೀಡಲು ಸಿದ್ದರಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು.
ಇದೀಗ ಮುಷ್ಕರ ಹಿಂಪಡೆಯಲಾಗಿದ್ದು, ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ಗಳ ಸಂಚಾರ ಆರಂಭಗೊಂಡಿದೆ.