ಶಿರಾ: ತಾಲೂಕಿನ ಉದ್ದರಾಮನಹಳ್ಳಿ ಗೇಟ್‌ನಲ್ಲಿ ಅಪ್ಪರ ಭದ್ರ ಯೋಜನೆಯಡಿ ನಾದೂರು ಕೆರೆಗೆ ನೀರು ಹರಿಸುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಚಾಲನೆ ನೀಡಿದರು.
ಸಹಸ್ರಾರು ರೈತರ ಮಹತ್ವಾಕಾಂಕ್ಷೆಯ ಅಪ್ಪರ ಭದ್ರ ಯೋಜನೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ ನವರಾತ್ರಿ ಶುಭ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲಸ ಪ್ರಾಂಭಿಸಿದ್ದೇವೆ. 2023ರ ಅಂತ್ಯದಲ್ಲಿ ಪೈಪ್‌ಲೈನ್ ಅಳವಡಿಸುವಂತ ಕಾರ್ಯ ಮುಗಿಸಿ, 1ನೇ ಹಂತದಲ್ಲಿ ಶಿರಾ ತಾಲೂಕಿನ 65 ಕೆರೆಗಳಿಗೆ ನೀರು ಹರಿಸುವ ಗುರಿ ಹೊಂದಲಾಗಿದೆ. ಇಂತಹ ಜನಪರ ಬೃಹತ್ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ;- ವಿದ್ಯುತ್ ಉತ್ಪಾದನಾ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ|UDAYAVANI NEWS BULLETIN|11/10/2021
ನ.15ರೊಳಗೆ ಸಿಎಂ ಭೇಟಿ: ನ.15ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರಾ ತಾಲೂಕಿಗೆ ಭೇಟಿ ನೀಡಲಿದ್ದು, ಅಂದೇ ರೈತರ ಬೃಹತ್ ಸಮಾವೇಶ ನಡೆಸಿ ಅಪ್ಪರ ಭದ್ರ ಯೋಜನೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಚಿವ ಬಿ.ಸಿ.ನಾಗೇಶ್ ಪಾಲ್ಗೊಳ್ಳುವ ದಿನ ಶಿರಾ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಶಿರಾ ಕ್ಷೇತ್ರದಲ್ಲಿ ಇನ್ನೂ ಹಲವಾರು ಕೆರೆಗಳು ಈ ಯೋಜನೆಯಲ್ಲಿ ಕೈಬಿಟ್ಟಿದ್ದಾರೆ ಎಂಬ ಬೇಡಿಕೆ ನನ್ನ ಗಮನದಲ್ಲಿದ್ದು, 2ನೇ ಹಂತದ ಕಾಮಗಾರಿಯಲ್ಲಿ ಸೇರ್ಪಡೆ ಮಾಡಲಾಗುವುದು.
ಸತತವಾಗಿ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಸಿದ ಪರಿಣಾಮ ಶಿರಾ ದೊಡ್ಡಕೆರೆ ಹಾಗೂ ಕಳ್ಳಂಬೆಳ್ಳ ಕೆರೆಗಳು ಭರ್ತಿಯಾಗಿರುವುದು ಹರ್ಷ ಮೂಡಿಸಿದೆ ಎಂದರು. ಮುಖ್ಯ ಅಭಿಯಂತರ ಭಾಸ್ಕರ್ ರೆಡ್ಡಿ, ಅಭಿಯಂತರ ಸಂಜಯ್, ರಘುರಾಮ್, ಕಲಯ ಲನ್, ಅದಲೂರು ರವೀಂದ್ರ, ಪುನಿತ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.