ಚನ್ನರಾಯಪಟ್ಟಣ: ತಾಲೂಕಿನ ಭಟ್ರಮಾರೇನ ಹಳ್ಳಿ ಗ್ರಾಮದಲ್ಲಿ ಕೈಗಾರಿಕೆ ಉದ್ದೇಶಕ್ಕೆ ಅಧಿಸೂಚನೆಗೆ ಒಳಪಡದೆ ಇದ್ದ ಭೂಮಿಯನ್ನು ಕಾನೂನು ಬಾಹಿರವಾಗಿ ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ವಶ ಪಡಿಸಿಕೊಂಡು, ಕರ್ನಾಟಕ ವಿದ್ಯುತ್ ಪ್ರಾಧಿಕಾರ(ಕೆಇಬಿ)ಗೆ ನೀಡಿದ್ದಾರೆಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ರೈತ ಸಿ.ನಾರಾಯಣಸ್ವಾಮಿ ಮಾತನಾಡಿ, ಭಟ್ರ ಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್ 7/1ರ ಭೂಮಿಯನ್ನು ಕೃಷಿಯಿಂದ ಬಂದ ಆದಾಯದ ಮೂಲಕ 1 ಎಕರೆ 28 ಗುಂಟೆ ಭೂಮಿಯನ್ನು ಖರೀದಿ ಮಾಡಿದ್ದು, ಅದರಂತೆ ಸ್ವಾಧೀನದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು 8 ಜನರ ಕುಟುಂಬ ಜೀವನ ನಿರ್ವಹಣೆ ಮಾಡಿಕೊಂಡು ಬಂದಿರುತ್ತೇವೆ. ಕೈಗಾರಿಕಾ ಉದ್ದೇಶಕ್ಕೆ ಸರ್ಕಾರದಿಂದ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ನಮ್ಮ ಭೂಮಿ ಇಲ್ಲದಿದ್ದರೂ ಅನಧಿಕೃತವಾಗಿ ವಶ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳಿಂದ ಕಳ್ಳತನ: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳೀಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂವತಿಯಿಂದ ಅನುಮತಿ ಪಡೆದು ಅಗತ್ಯ ಕಟ್ಟಡ ಸಾಮಾಗ್ರಿ ಜಮೀನಿಲ್ಲಿತ್ತು. ಚಪ್ಪಡಿ ಕಲ್ಲು, ಕೃಷಿಸಲಕರಣೆಗಳು ಶೇಖರಿಸಿದ್ದೇವು, ಆದರೆ, ಹೊಲದಕೆಲಸ ಮುಗಿಸಿ ಮನೆಗೆ ತೆರಳಿದ ನಂತರ ಕೆಐಎಡಿಬಿ ಅಧಿಕಾರಿಗಳು ಬಂದು ಅಲ್ಲಿದ್ದ 5 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಮತ್ತೂಂದೆಡೆ ಸಾಗಿಸಿದ್ದಾರೆ. ಇದು ಸರ್ಕಾರವೇ ಮಾಡಿರುವ ಕಳ್ಳತನ ಎಂದು ದೂರಿದರು.
ಸಹಾಯಕ್ಕೆ ಬಾರದ ಪೊಲೀಸರು: ಅಧಿಸೂಚನೆ ಯಾಗದ ಜಾಗವನ್ನು ಅನಧಿಕೃತವಾಗಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಗಳಾದ ಚನ್ನರಾಯಪಟ್ಟಣ ಹಾಗೂ ವಿಜಯಪುರ ಠಾಣೆಗಳಲ್ಲಿ ದೂರು ನೀಡಲು ಯತ್ನಿಸಿದಾಗಲೂ ಅನ್ನದಾತರ ರಕ್ಷಣೆ ಮಾಡುವ ಬದಲು, ಅಧಿಕಾರಿಗಳಿಗೆ ಭದ್ರತಾ ಗೋಡೆಗಳಾಗಿ ಪೊಲೀಸ್ ಸಿಬ್ಬಂದಿ ನಿಂತರು, ತೀವ್ರವಾದ ಪ್ರಕರಣವನ್ನು ಎನ್ಸಿಆರ್ ಮಾಡಿ ಠಾಣೆಯಿಂದ ಹೊರಹಾಕಿದರೂ ಎಂದು ಅಳಲು ವ್ಯಕ್ತಪಡಿಸಿದರು.
2 ವರ್ಷ ಹೈಕೋರ್ಟ್ ಅಲೆದಾಟ: ಸರ್ಕಾರ ಸ್ವಾಧೀನ ಮಾಡಲು ನೋಟಿಫಿಕೇಷನ್ ಮಾಡದ ಭೂಮಿಯನ್ನು ವಶಕ್ಕೆ ಪಡೆದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಪರಿಕರಗಳನ್ನು ಹಾಕಿರುವ ಇಲಾಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿಯಥಾ ಸ್ಥಿತಿಯ ತಡೆಯಾಜ್ಞೆ ತಂದರೂ, ಮಾನ್ಯ ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ನೀಡದೇ ಪುನಃ ಜಮೀನಿನಲ್ಲಿ ಕಾಮಗಾರಿಮಾಡಲಾಗುತ್ತಿದೆ, ಆಡಳಿತಾಂಗ, ನ್ಯಾಯಾಂಗವೂ ನೆರವಿಗೆ ಬಾರದಿದಾಗ ದೇಶದ ಸಂವಿಧಾನದಮೇಲೆ ಗೌರವ ಕಡಿಮೆಯಾಗುತ್ತಿದೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.
280 ದಿನಗಳಿಂದ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಜೊತೆಗೂಡಿ ನಮ್ಮ ಭೂಮಿ ಉಳಿವಿಗೆ ನಿರಂತರ ಪತ್ರ ವ್ಯವಹಾರಗಳನ್ನು ಕಂದಾಯ ಇಲಾಖೆಯೊಂದಿಗೆ ಮಾಡಲಾಗುತ್ತಿದೆ. ಅಧಿಕಾರಿ ಗಳಿಗೆ ರೈತರ ಹಿತ ಕಾಪಾಡುವ ಇಚ್ಛಾಶಕ್ತಿ ಇಲ್ಲ, ಯಾವುದೇ ಕಾರಣಕ್ಕೂ ಭೂಮಿನೀಡುವುದಿಲ್ಲ ಬೇಕಿದ್ದರೇ ಇಲ್ಲಿಯೇ ಪ್ರಾಣ ಬಿಟ್ಟು ರೈತಸ್ಮಾರಕ ಕಟ್ಟಿಸುತ್ತೇವೆ ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ವಕೀಲ ಸಿದ್ದಾರ್ಥ್, ರಾಯಸಂದ್ರದಸೋಮಶೇಖರ್, ಚನ್ನಹಳ್ಳಿ ನಾರಾಯಣಸ್ವಾಮಿ, ಬಿದಲೂರು ರಮೇಶ್, ಐಬಸಾಪುರ ರಾಮಾಂಜಿ ನಪ್ಪ, ಮೂಡಿಗಾನಹಳ್ಳಿ ಹನುಮಂತರಾಯಪ್ಪ, ಕಾರಹಳ್ಳಿ ರಾಜಣ್ಣ, ಕುಂದಾಣ ವೆಂಕಟೇಶ್, ವಿಜಯಪುರ ಅಶ್ವಥ್, ಮಂಜುನಾಥ್ ಇದ್ದರು.