Advertisement

ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ

08:52 PM Nov 03, 2022 | Team Udayavani |

ಬೆಂಗಳೂರು: ದೇಶದಲ್ಲಿ 2030ರ ವೇಳೆಗೆ ಪ್ರತಿದಿನ 7 ಮಿಲಿಯನ್‌ ಬ್ಯಾರೆಲ್‌ ಪೆಟ್ರೋಲಿಯಂ ಉತ್ಪನ್ನಗಳ ಅವಶ್ಯಕತೆ ಬೀಳಲಿದೆ. ಅದಕ್ಕೆ ಕಡಿವಾಣ ಹಾಕಲು ಈಗಿನಿಂದಲೇ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಅವಶ್ಯಕತೆಯಿದೆ. ಅದರಲ್ಲೂ ಸಣ್ಣ ವಾಹನಗಳಿಗಿಂತ ಬಸ್‌, ಟ್ರಕ್‌ಗಳಂತಹ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇನ್ವೆಸ್ಟ್‌ ಕರ್ನಾಟಕದಲ್ಲಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಇನ್ವೆಸ್ಟ್‌ ಕರ್ನಾಟಕದ ಎರಡನೇ ದಿನವಾದ ಗುರುವಾರ ಭಾರತದ ಭವಿಷ್ಯ: ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ವಿಷಯದ ಕುರಿತು ನಡೆದ ಸಂವಾದದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಯಿತು.

ಸ್ವಿಚ್‌ ಮೊಬಿಲಿಟಿಯ ಮುಖ್ಯ ಆದಾಯ ಅಧಿಕಾರಿ ಸಚಿನ್‌ ನಿಜಹ್ವಾನ್‌ ಮಾತನಾಡಿ, ಭಾರತ ವಿಶ್ವದಲ್ಲಿ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ. ಇಲ್ಲಿನ ಜಿಡಿಪಿಗೆ ಸಾರಿಗೆ ಕ್ಷೇತ್ರ ಶೇ. 6.9 ಕೊಡುಗೆ ನೀಡುತ್ತಿದೆ. ಹೀಗಾಗಿ ವಿಶ್ವದ ಮಾಲಿನ್ಯ ನಗರಗಳಲ್ಲಿ ಭಾರತದ ನಗರಗಳ ಹೆಸರೂ ಕೇಳಿಬರುತ್ತಿದೆ. ಇದಕ್ಕೆ ಸಾರಿಗೆ ವ್ಯವಸ್ಥೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಹೆಚ್ಚಿರುವುದೇ ಕಾರಣ. ಇದನ್ನು ಬದಲಿಸಲು ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು. ಈಗಿರುವ ವಾಹನಗಳ ಸಂಖ್ಯೆಯಲ್ಲಿ ಶೇ. 30 ಭಾಗ ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತನೆಗೊಂಡರೆ ಇಂಧನ ಬಳಕೆ ಪ್ರಮಾಣ ಶೇ. 15 ಕಡೆಯಾಗಲಿದ್ದು, 1 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ ಎಂದರು.

ಸನ್‌ ಮೊಬಿಲಿಟಿಯ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಚೇತನ್‌ ಮೈನಿ ಮಾತನಾಡಿ, 2030ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಲಿದೆ. ಅದರ ಜತೆಗೆ ನವೀಕರಿಸಬಹುದಾದ ಇಂಧನದ ಉತ್ಪಾದನೆ ಮತ್ತು ಬಳಕೆಯಲ್ಲೂ ಏರಿಕೆಯಾಗಲಿದೆ. ಅದಕ್ಕೆ ಪೂರಕವಾಗಿ ನೀತಿ, ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. 3 ತಿಂಗಳಲ್ಲಿ ಒಂದು ಎಲೆಕ್ಟ್ರಿಕ್‌ ಬಸ್‌ ಉತ್ಪಾದನೆಯಾದರೆ, ಅದಕ್ಕೆ ಬೇಕಾಗುವ ಕಚ್ಛಾ ವಸ್ತುಗಳು ಸೇರಿ ಇನ್ನಿತರ ವಸ್ತುಗಳ ಪೂರೈಕೆಯು ಸಾಕಷ್ಟು ವಿಳಂಬವಾಗಲಿದೆ. ಅಲ್ಲದೆ, ವಾಹನಗಳ ಉತ್ಪಾದನೆಗೆ ತಗಲುವ ವೆಚ್ಚಕ್ಕಿಂತ ಅದಕ್ಕೆ ಬಳಸುವ ಕಚ್ಛಾ ವಸ್ತುಗಳ ಬೆಲೆ ಹೆಚ್ಚಿದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಕಚ್ಛಾ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆ ಪ್ರಮಾಣ ಹೆಚ್ಚಿದೆ.  ತೆರಿಗೆ ಪ್ರಮಾಣ ಕಡಿಮೆ ಮಾಡಿದರೆ, ವಾಹನಗಳ ಬೆಲೆಯಲ್ಲೂ ಇಳಿಕೆಯಾಗಿ ಬಳಕೆದಾರರ ಸಂಖ್ಯೆ ಹೆಚ್ಚಲಿದೆ ಎಂದು ತಿಳಿಸಿದರು.

ಟಿಎಂಎಲ್‌ ಸ್ಮಾರ್ಟ್‌ ಮೊಬಿಲಿಟಿ ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಸಿಮ್‌ ಕುಮಾರ್‌ ಮಖ್ಯೋಪಧ್ಯಾಯ ಮಾತನಾಡಿ, ಎಲೆಕ್ಟ್ರಿಕ್‌ ವಾಹನಗಳ ವಿಭಾಗದಲ್ಲಿ ಬ್ಯಾಟರಿಯ ಬೆಲೆ ತೀರಾ ಹೆಚ್ಚಿದೆ. ಸದ್ಯ 5ನೇ ಜನರೇಷನ್‌ನ ಬ್ಯಾಟರಿ ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ, ಈ ಬ್ಯಾಟರಿಗೆ ನಿಗದಿ ಮಾಡಿರುವ ಜಿಎಸ್‌ಟಿ ಪ್ರಮಾಣ ಹೆಚ್ಚಿದೆ. ಇದನ್ನು ಕಡಿಮೆ ಮಾಡಬೇಕು. ಅದರ ಜತೆಗೆ ವಾಹನಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಬೇಕು. ವಾಹನ ಬಳಕೆದಾರರಿಗೆ ಅದರಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. 2 ಮತ್ತು 3 ಚಕ್ರದ ವಾಹನಗಳಿಗಿಂತ ಲಘು ಮೊಟಾರು ಹಾಗೂ ಭಾರೀ ವಾಹನಗಳನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ಆಗಬೇಕು ಎಂದು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next