ವಾಡಿ: ದೈಹಿಕವಾಗಿ ನ್ಯೂನತೆಗೊಳಗಾದ ವಿಕಲಚೇತನ ವಿಶೇಷ ಮಕ್ಕಳ ಚಿಕಿತ್ಸೆಗೆ ಸರಕಾರ ಆದ್ಯತೆ ನೀಡಿದೆ. ಇದರೊಂದಿಗೆ ಶಿಕ್ಷಣ ಇಲಾಖೆ ಮಕ್ಕಳ ಪೋಷಕರಿಗೆ ವಾರ್ಷಿಕ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.
ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಸೋಮವಾರ ಸ್ಥಳೀಯ ವಿವಿಧ ಶಾಲೆಗಳ ವಿಕಲಚೇತನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಪಿಜಿಯೋಥೆರೆಪಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 795 ಮಕ್ಕಳು ಬಹುವಿಧ ನ್ಯೂನತೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ದೈಹಿಕ ನ್ಯೂನತೆ, ನರಗಳ ದೌರ್ಬಲ್ಯ, ಚಲನ ನ್ಯೂನತೆ, ಕುಬ್ಜತೆ, ಅಂಧತ್ವ ಹೀಗೆ ವಿವಿಧ ರೋಗಗಳಿಂದ ಮಕ್ಕಳ ಭವಿಷ್ಯ ಕಮರುತ್ತಿದೆ. ಇಂತಹ ಮಕ್ಕಳನ್ನು ಗುರುತಿಸುವ ಮತ್ತು ಚಿಕಿತ್ಸೆ ಕೊಡಿಸುವ ಮಹತ್ವದ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಿರುವುದಲ್ಲದೇ ಮಾಸಿಕ 230 ರೂ. ಪ್ರೋತ್ಸಾಹ ಧನ, 80 ರೂ. ಬೆಂಗಾವಲು ಧನ ಮತ್ತು 40 ರೂ. ಸಾರಿಗೆ ಭತ್ತೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಪೋಷಕರು ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಪಿಜಿಯೋಥೆರೇಪಿಯ ಡಾ| ಸೈಯ್ಯದ್ ಅಕºರ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಿಂ ಪ್ಯಾರೆ, ಸದಸ್ಯ ಹುಸೇನ್ ಪಾಶಾ, ಬಿಐಇಆರ್‌ಟಿ ಶಿವುಕುಮಾರ ಹಿರೇಮಠ, ಮುಖ್ಯಶಿಕ್ಷಕಿ ಸಿಸ್ಟರ್ ಗ್ರೇಸಿ, ಶಿಕ್ಷಕರಾದ ಗೌತಮಿ ಹಿರೋಳಿ, ಶಿವಾಜಿ ಸೂರ್ಯವಂಶಿ ಸೇರಿದಂತೆ ವಿವಿಧ ಶಾಲೆಗಳ ವಿಕಲಚೇತನ ಮಕ್ಕಳು ಹಾಗೂ ಪೋಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.