Advertisement

Sports ವಿದ್ಯಾರ್ಥಿಗಳಿಗೆ ಉತ್ತೇಜನ: ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

12:17 AM Dec 03, 2024 | Team Udayavani |

ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯ ಸರಕಾರ ಕ್ರೀಡಾ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಹಾಜರಾತಿ ರಿಯಾಯಿತಿ ಮತ್ತು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 10ರಷ್ಟು ಕೃಪಾಂಕಗಳನ್ನು ನೀಡಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಅವರ ಈ ಭರವಸೆ, ರಾಜ್ಯದ ಕ್ರೀಡಾಪಟುಗಳು ಮತ್ತು ಶಾಲಾಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥಿಗಳಲ್ಲಿ ಆಶಾವಾದವನ್ನು ಮೂಡಿಸಿದೆ.

Advertisement

ರಾಜ್ಯದಲ್ಲಿ ಈ ಹಿಂದಿನಿಂದಲೂ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರತೀ ಶೈಕ್ಷಣಿಕ ಸಾಲಿನಲ್ಲಿ ಹಾಜರಾತಿಯಲ್ಲಿ ರಿಯಾಯಿತಿ ನೀಡುತ್ತ ಬರಲಾಗಿದ್ದು, ಈಗ ಕ್ರೀಡಾ ವಿದ್ಯಾರ್ಥಿಗಳಿಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲೂ ಶೇ. 10ರಷ್ಟು ಕೃಪಾಂಕಗಳನ್ನು ನೀಡಿದ್ದೇ ಆದಲ್ಲಿ ಅವರು ಕ್ರೀಡಾ ಚಟುವಟಿಕೆಗಳಲ್ಲಿ ಇನ್ನಷ್ಟು ಆಸಕ್ತಿಯಿಂದ ಅಭ್ಯಾಸ ನಿರತರಾಗಲು ಸಾಧ್ಯವಾಗಲಿದೆ. ವರ್ಷವಿಡೀ ತರಬೇತಿ, ಕ್ರೀಡಾ ಚಟುವಟಿಕೆ, ಸ್ಪರ್ಧಾಕೂಟ, ದೈಹಿಕ ಸಮಸ್ಯೆಗಳ ಕಾರಣಗಳಿಂದಾಗಿ ತರಗತಿಗಳಿಗೆ ಕ್ರೀಡಾ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗೈರಾಗಬೇಕಾಗುತ್ತದೆ. ಅಷ್ಟು ಮಾತ್ರವಲ್ಲದೆ ಇದರಿಂದಾಗಿ ಅವರ ಕಲಿಕೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಚಟುವಟಿಕೆ­ಗಳಿಗೆ ಅರ್ಧದಲ್ಲಿಯೇ ತಿಲಾಂಜಲಿ ನೀಡಿ ಶಿಕ್ಷಣದತ್ತ ಗಮನ ಕೇಂದ್ರೀಕರಿಸು­ತ್ತಾರೆ. ಇದರಿಂದಾಗಿ ಅವರ ಕ್ರೀಡಾ ಬದುಕು ಅಲ್ಲಿಗೇ ಕೊನೆಗೊಳ್ಳುವಂತಾಗುತ್ತದೆ. ಇವೆಲ್ಲವನ್ನು ಗಮನದಲ್ಲಿರಿಸಿ ರಾಜ್ಯ ಸರಕಾರ ಕ್ರೀಡಾ ವಿದ್ಯಾರ್ಥಿಗಳಿಗೆ ಈ ಎರಡು ಮಹತ್ವದ ಕೊಡುಗೆಗಳ ಭರವಸೆಯನ್ನು ನೀಡಿದೆ.

ಇದೇ ವೇಳೆ ಒಲಿಂಪಿಕ್ಸ್‌ ಸಹಿತ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ, ಪದಕಗಳನ್ನು ಗೆಲ್ಲುವ ರಾಜ್ಯದ ಕ್ರೀಡಾಳುಗಳಿಗೆ ನಗದು ಪುರಸ್ಕಾರವನ್ನು ನೀಡುವ ಸಂಪ್ರದಾಯವನ್ನು ಮುಂದುವರಿಸಲು ನಿರ್ಧರಿಸಿದ್ದು, ಇದಕ್ಕಾಗಿ 10 ಕೋ.ರೂ. ಮೀಸಲಿರಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಕ್ರೀಡಾಳುಗಳ ಪಾಲಿಗೆ ಒಂದು ಶಕ್ತಿವರ್ಧಕವೇ ಸರಿ.

ರಾಜ್ಯ ಸರಕಾರದ ಈ ಎಲ್ಲ ಭರವಸೆ, ಘೋಷಣೆ ರಾಜ್ಯದಲ್ಲಿ ಕ್ರೀಡೆಗೆ ಮತ್ತಷ್ಟು ಬಲ ತುಂಬಲಿದೆಯಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪ್ರೇರಣೆಯಾ­ಗಲಿದೆ. ಆದರೆ ಇಂತಹ ಭರವಸೆ, ಉತ್ತೇಜನದಾಯಕ ಘೋಷಣೆಗಳು ರಾಜ್ಯದಲ್ಲಿ ಇದೇ ಮೊದಲೇನಲ್ಲ. ಆದರೆ ಈ ಭರವಸೆ, ಘೋಷಣೆಗಳು ಅಕ್ಷರಶಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಟ್ಟುನಿಟ್ಟಿನ ನಿಯಮಾವಳಿ, ನಿರ್ಬಂಧಗಳಿಂದಾಗಿ ಈ ಕೊಡುಗೆಗಳ ಲಾಭ ಕ್ರೀಡಾ ವಿದ್ಯಾರ್ಥಿಗಳಿಗೆ ಲಭಿಸದಂತಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಕ್ರೀಡಾಳುಗಳು ಪ್ರತೀ ಬಾರಿಯೂ ನಿರಾಶೆ, ಹತಾಶೆ ಅನುಭವಿಸುವುದು ಸಾಮಾನ್ಯ ಬೆಳವಣಿಗೆಯಾಗಿ ಮಾರ್ಪಟ್ಟಿದೆ.

ಸಿಎಂ ಭರವಸೆಗಳೆಲ್ಲವೂ ಕ್ರೀಡಾ ವಿದ್ಯಾರ್ಥಿಗಳ ಮನೋಬಲ ವೃದ್ಧಿಗೆ ಪೂರಕ. ಆದರೆ ಈ ಭರವಸೆಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗದೆ ಕಾರ್ಯ ರೂಪಕ್ಕೆ ಬರಬೇಕು. ಈ ಹಿಂದೆ ಹಲವಾರು ಬಾರಿ ಪದಕ ವಿಜೇತ ಕ್ರೀಡಾಳುಗಳನ್ನು ಕನಿಷ್ಠ ಗೌರವಿಸುವ ಕಾರ್ಯಕ್ಕೂ ಸರಕಾರ ಮುಂದಾಗದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಇದೇ ವೇಳೆ ಶಾಲಾಕಾಲೇಜು­ಗಳಲ್ಲಿ ಅದರಲ್ಲೂ ಮುಖ್ಯವಾಗಿ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ಅಗತ್ಯವಾದ ಮೂಲಸೌಕರ್ಯ, ಸಾಧನ ಸಲಕರಣೆಗಳನ್ನು ಒದಗಿಸುವ ಕಾರ್ಯ ಮಾಡಬೇಕು. ಪ್ರತಿಯೊಂದೂ ಶಾಲೆಗೂ ಕಡ್ಡಾಯವಾಗಿ ದೈಹಿಕ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳನ್ನು ಎಳವೆಯಿಂದಲೇ ಸಜ್ಜುಗೊಳಿಸಬೇಕು. ಜತೆಯಲ್ಲಿ ಕ್ರೀಡಾ ವಿದ್ಯಾರ್ಥಿಗಳಿಗೆ ನೀಡಲಾಗುವ ಎಲ್ಲ ಪ್ರೋತ್ಸಾಹ, ಪುರಸ್ಕಾರಗಳ ನೀಡಿಕೆ ಸಂದರ್ಭದಲ್ಲಿ ಸರಕಾರಿ, ಅನುದಾನಿತ, ಖಾಸಗಿ ಸಂಸ್ಥೆಗಳೆಂದು ತಾರತಮ್ಯ ಮಾಡದೆ ಎಲ್ಲ ಪ್ರತಿಭಾವಂತರನ್ನು ಸರಿಸಮಾನವಾಗಿ ಕಾಣುವ ಪ್ರವೃತ್ತಿಯನ್ನು ಸರಕಾರ ಬೆಳೆಸಿಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next