Advertisement

ಯುವ ಜನತೆ ಹೊರ ಜಗತ್ತಿನ ಕಡೆಗೆ ಬರಲಿ: ತಿಮಕ್ಕ 

10:17 AM Jul 04, 2018 | Team Udayavani |

ಅಕ್ಷರ ಜ್ಞಾನ ವಿಲ್ಲದಿದ್ದರೂ ನೂರಾರು ಗಿಡ-ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನೇ ತಮ್ಮ ಮಕ್ಕಳಂತೆ ಸಾಕಿ ಪರಿಸರ ಪ್ರೀತಿಗೆ ಮಾದರಿ ಎನಿಸಿಕೊಂಡಿರುವ ಮಹಿಳೆ ಸಾಲು ಮರದ ತಿಮ್ಮಕ್ಕ. ಈಗ ಅವರಿಗೆ ವಯಸ್ಸು 107. ಆದರೆ, ಈ ಇಳಿ ವಯಸ್ಸಿನಲ್ಲಿಯೂ ಊರೂರು ತಿರುಗಿ ಪರಿಸರ- ಗಿಡ- ಮರಗಳನ್ನು ನೆಟ್ಟು ಬೆಳೆಸುವಂತೆ ಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ತಾವು ಹೋದ ಕಡೆಗಳಲ್ಲೆಲ್ಲ ಗಿಡ ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಾಲುಮರದ ತಿಮ್ಮಕ್ಕ ಅವರು ‘ಉದಯವಾಣಿ ಸುದಿನ’ ಸಂದರ್ಶನದಲ್ಲಿ ನವೀನ್‌ ಭಟ್‌ ಇಳಂತಿಲ ಜತೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

Advertisement

ನಿಮ್ಮ ಪ್ರಕಾರ ಯುವ ಪೀಳಿಗೆಯಲ್ಲಿ ಪರಿಸರ ಕಾಳಜಿ ಇದೆಯೇ?
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಪರಿಸರದ ಬಗ್ಗೆ ಕಾಳಜಿ ಮೂಡುತ್ತಿದೆ. ಆದರೂ ಶಾಲಾ ಹಂತದಲ್ಲಿಯೇ ಶಿಕ್ಷಕರು, ಪರಿಸರ ಹೋರಾಟಗಾರರು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾರ್ಗದರ್ಶನ ನೀಡಬೇಕು. ಯುವ ಜನತೆ ಕೂಡ ಸಾಮಾಜಿಕ ಜಾಲ ತಾಣದಿಂದ ಹೊರ ಜಗತ್ತಿನ ಕಡೆಗೆ ಬರಬೇಕಾಗಿದೆ.

ಈಗಿನ ಪರಿಸರವಾದಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗಿನ ಕೆಲವು ಪರಿಸರ ಹೋರಾಟಗಾರರನ್ನು ನೋಡಿದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಒಂದೆಡೆ ಪರಿಸರ ಹಾಳಾಗುತ್ತಿದೆ. ಪರಿಸರವಾದಿಗಳೆಂದು ಕರೆಸಿಕೊಳ್ಳುವವರ ಪೈಕಿ ಹೆಚ್ಚಿನವರು ಕೇವಲ ಪ್ರಚಾರ, ಪ್ರಶಸ್ತಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ. ನಾನು ಅಂತಹವರನ್ನು ಇಷ್ಟಪಡುವುದಿಲ್ಲ. ಪರಿಸರ ಸೇವೆಯನ್ನು ತನ್ನ ತಾಯಿ ಸೇವೆ ಎಂದು ಎಲ್ಲರೂ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ದೇಸಿ ಗಿಡ ಬಿಟ್ಟು, ವಿದೇಶಿ ಗಿಡಗಳನ್ನು ಬೆಳೆಸಲು ಆಸಕ್ತಿ ವಹಿಸುತ್ತಿದ್ದಾರಲ್ಲ ?
ಹೌದು; ನನ್ನ ದೃಷ್ಟಿಯಲ್ಲಿ ಇದು ತಪ್ಪು. ವಿದೇಶಿ ಮರ ಗಳಿಂದ ಅಪಾಯವೇ ಹೆಚ್ಚು. ಸಣ್ಣ ಗಾಳಿ-ಮಳೆ ಬಂದರೆ ಸಾಕು ಅವುಗಳು ಬುಡಮೇಲಾಗಿ ಸಾರ್ವಜನಿಕರಿಗೆ ಅಪಾಯ ಉಂಟುಮಾಡುತ್ತವೆ. ಆದರೆ ನಮ್ಮ ದೇಶೀಯ ತಳಿ ಗಿಡ-ಮರಗಳು ಹೆಚ್ಚು ಬಲಿಷ್ಠ ವಾಗಿದ್ದು, ಹೆಚ್ಚಿನ ಬಾಳ್ವಿಕೆ ಬರುವಂಥದ್ದು. ಇನ್ನು ವಿದೇಶಿ ಮರ ಬೇಗ ಬೆಳೆಯುತ್ತದೆ ನಿಜ; ಆದರೆ, ಇವುಗಳನ್ನು ದನ, ಮೇಕೆ, ಕುರಿ ತಿನ್ನುವುದಿಲ್ಲ ಎಂಬ ಕಾರಣಕ್ಕೆ ಇಂಥಹ ಹೊರ ದೇಶದ ಗಿಡ-ಮರ ಬೆಳೆಸುವುದಕ್ಕೆ ಉತ್ತೇಜಿಸಲಾಗುತ್ತಿದೆ. ಪರಿಸರ ಅಥವಾ ಹಸಿರೀಕರಣದ ದೃಷ್ಟಿಯಿಂದ ಇದು ಒಳ್ಳೆಯದಲ್ಲ.

ಮುಂಗಾರು ಆರಂಭವಾಗಿದ್ದು, ನಿಮ್ಮ ಪ್ರಕಾರ ಈ ಸಮಯದಲ್ಲಿ ಯಾವ ರೀತಿಯ ಗಿಡ ನೆಟ್ಟರೆ ಸೂಕ್ತ? 
ಹಲಸು, ಮಾವು ಬೇವು ಹೊಂಗೆ, ಆಲದ ಮರ ಸೇರಿದಂತೆ ಆಮ್ಲಜನಕವನ್ನು ಹೆಚ್ಚು ನೀಡುವಂತಹ ಗಿಡಗಳಿಗೆ ಪ್ರಾಶಸ್ತ್ಯ ನೀಡಬೇಕು.

Advertisement

ನೀವು ಬೆಳೆಸಿದ ಮರ ಈಗ ದೊಡ್ಡದಾಗಿದೆ. ಅನೇಕ ಮಂದಿಗೆ ನೆರಳು ನೀಡುತ್ತಿದೆ ಇದನ್ನು ಕಂಡಾಗ ಏನೆನಿಸುತ್ತಿದೆ?
ನಿಜಕ್ಕೂ ಖುಷಿಯಾಗುತ್ತದೆ. ಅಂದಿನ ಕಾಲದಲ್ಲಿ ಮರಕ್ಕೆ ನೀರು ಹಾಯಿಸಲು ಸುಮಾರು ನಾಲ್ಕು ಕಿ.ಮೀ. ಕ್ರಮಿಸಿ ನೀರು ತರುತ್ತಿದ್ದೆವು. ಗಿಡ ನೆಟ್ಟರೆ ಎಂದಿಗೂ ನಷ್ಟವಾಗುವುದಿಲ್ಲ. ಮನುಷ್ಯರಿಗೆ ಪಕ್ಷಿಗಳಿಗೆ ನೆರವಾಗುತ್ತದೆ.

ನಿಮ್ಮ ಬದುಕಿನ ಮುಂದಿನ ಆಸೆ ಏನು?
ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸುವುದು ಮತ್ತು ನನ್ನ ಮಗ ಉಮೇಶನಿಗೆ ಮದುವೆ ಮಾಡಿಸುವುದು ಸದ್ಯ ನನ್ನ ಜೀವನದಲ್ಲಿ ಇಟ್ಟುಕೊಂಡಿರುವ ದೊಡ್ಡ ಎರಡು ಆಸೆಗಳು.

ಪರಿಸರ ಸಂರಕ್ಷಣೆಯ ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಂತೆ ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿದವರು ನೋಡಿಕೊಳ್ಳಬೇಕು. ಗಿಡ ಬೆಳೆಸಿದರೆ ಸಾಲದು; ಪೋಷಣೆಯತ್ತಲೂ ಗಮನ ನೀಡಬೇಕು. ಪ್ರತಿ ಮನೆ ಮನೆಗೂ ಉಚಿತವಾಗಿ ದೇಶೀಯ ಗಿಡ, ಹಣ್ಣಿನ ಗಿಡ ಕೊಡಬೇಕು. ಜತೆಗೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬೇಕು.
 - ಸಾಲು ಮರದ ತಿಮ್ಮಕ್ಕ

Advertisement

Udayavani is now on Telegram. Click here to join our channel and stay updated with the latest news.

Next