ಹುಣಸೂರು: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಗಿದ್ದು, ಅವುಗಳನ್ನು ಗುರುತಿಸಿ ಪೋ›ತ್ಸಾಹಿಸುವ ಕೆಲಸ ಶಿಕ್ಷಕರಿಂದಾಗಬೇಕು, ಆಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ ಎಂದು ಉದ್ಯಮಿ ಅಮರ್‌ನಾಥ್ ಶ್ಲಾಘಿಸಿದರು.
ತಾಲೂಕಿನ ರತ್ನಪುರಿಯ ಓಂ ಸಾಯಿ ಶಿಕ್ಷಣ ಸಂಸ್ಥೆಯ 4ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸವಿ ಸಂಜೆಯ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ಕಲ್ಪಿಸುವಲ್ಲಿ ಈ ಶಿಕ್ಷಣ ಸಂಸ್ಥೆಯ ಸಾಧನೆ ಅಪರೂಪವಾದುದೆಂದರು.
ಪೋಷಕರು ಸಹಕರಿಸಿ: ಸಂಸ್ಥೆಯ ಕಾರ್ಯದರ್ಶಿ ದಿಲೀಪ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಪ್ರಗತಿಗೆ ಪೂರಕವಾದ ಎಲ್ಲ ವ್ಯವಸ್ಥೆ ಸಂಸ್ಥೆಯಲ್ಲಿದ್ದು, ಪೋಷಕರು ಸಹಕರಿಸುವ ಮೂಲಕ ಮಕ್ಕಳ ಪ್ರಗತಿಗೆ ಕಾರಣರಾಗಿ, ಮುಂದಿನ ದಿನದಲ್ಲಿ ಪ್ರೌಢಶಿಕ್ಷಣ ನೀಡುವ ಯೋಜನೆ ಇದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಹದೇವಸ್ವಾಮಿ, ಮುಖ್ಯಶಿಕ್ಷಕಿ ರಾಜೇಶ್ವರಿ ಶಾಲಾ ವರದಿ ಮಂಡಿಸಿದರು, ಶಿಕ್ಷಕರಾದ ಜಿತೇಂದ್ರ, ಸಹನ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ನಾಗೇಂದ್ರ, ಟ್ರಸ್ಟಿಗಳಾದ ಹನಗೋಡುಮಂಜುನಾಥ್, ರಾಜಣ್ಣ, ಕಿರಣ್ ಸೇರಿದಂತೆ ಪೋಷಕ ವೃಂದ ಉಪಸ್ಥಿತರಿದ್ದರು.
ಆಕರ್ಷಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ಶಾಲೆಯ ವಿದ್ಯಾರ್ಥಿಗಳು ರಂಗು-ರಂಗಿನ ಬಟ್ಟೆ ತೊಟ್ಟು ವಿವಿಧ ನೃತ್ಯ ಪ್ರದರ್ಶಿಸಿ ಪೋಷಕರು ಹಾಗೂ ನೆರೆದಿದ್ದವರನ್ನು ರಂಜಿಸಿದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.