ಬೇಲೂರು: ಪಟ್ಟಣದ ಮುಖ್ಯರಸ್ತೆ, ನೆಹರು ನಗರ, ದೇವಾಲಯ ರಸ್ತೆ ಹಾಗೂ ಅಂಬೇಡ್ಕರ್ ವೃತ್ತದ ಬಳಿಯ ಅಂಗಡಿ ಮಾಲೀಕರು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಪಾದಚಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬೇಲೂರು ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮುಖ್ಯರಸ್ತೆಯಿಂದ ನೆಹರುನಗರದ ತನಕ ತೆರವು ಕಾರ್ಯಚರಣೆ ನಡೆಸಲಾಯಿತು.
ವಿಶ್ವ-ವಿಖ್ಯಾತ ಬೇಲೂರು ಪಟ್ಟಣಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಶಿಲ್ಪಕಲೆಗಳ ದೇಗುಲ ವೀಕ್ಷಣೆಗೆ ಬರುತ್ತಾರೆ, ಬಂದ ಪ್ರವಾಸಿಗರು ಪಟ್ಟಣದ ಅಂದ-ಚೆಂದ ವೀಕ್ಷಣೆ ಮಾಡುತ್ತಾರೆ, ಅಲ್ಲದೆ ಅಂಗಡಿಗಳ ಮಾಲೀಕರು ತಮ್ಮ ಮನಃಬಂದಂತೆ ಫುಟ್‌ಪಾತ್ ಮೇಲೆ ಅಂಗಡಿಗಳ ವಸ್ತುಗಳನ್ನು ಇಟ್ಟುಕೊಂಡು ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದರು.
ಇದ್ದರಿಂದ ವೃದ್ಧರು, ಅಂಗವಿಕಲರು ಬೇಲೂರು ಮುಖ್ಯರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಂಘ-ಸಂಸ್ಥೆಯ ಮುಖಂಡರು ಹಾಗೂ ಸಾರ್ವಜನಿಕರು ತಕ್ಷಣವೇ ಪುರಸಭೆ ಫುಟ್‌ಪಾತ್ ಕಾರ್ಯಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದರು,
ಇದೇ ವೇಳೆಯಲ್ಲಿ ಕರವೇ(ಪ್ರವೀಣಶೆಟ್ಟಿ ಬಣ) ಸಂಘಟನೆ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿ ತಕ್ಷಣವೇ ತೆರವು ಕಾರ್ಯಚರಣೆ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಿನ್ನೆಲೆ ಫುಟ್‌ಪಾತ್ ಕಾರ್ಯಾಚರಣೆ ನಡೆಸಿದರು.
ಮುಖ್ಯರಸ್ತೆಯಿಂದ ಬೆಳಗ್ಗಿನಿಂದಲೇ ಪುರಸಭಾ ಸಿಬ್ಬಂದಿ ಸಹಕಾರದಿಂದ ಆರಂಭಿಸಿದ ಕಾರ್ಯಾಚರಣೆಯಲ್ಲಿ ಫುಟ್‌ಪಾತ್ ಮೇಲೆ ಇಟ್ಟ ಅಂಗಡಿ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ವಶ ಪಡಿಸಿಕೊಂಡು ತಮ್ಮ ವಾಹನಕ್ಕೆ ಹಾಕಿಕೊಳ್ಳುತ್ತಿರುವ ಘಟನೆ ಸಾಮಾನ್ಯವಾಗಿತ್ತು, ಇನ್ನು ಬಹುತೇಕ ಅಂಗಡಿಗಳ ನಾಮಫಲಕಗಳನ್ನು ಈ ಸಂದರ್ಭದಲ್ಲಿ ತೆರವು ಮಾಡಲಾಯಿತು.