Advertisement

ರಾಜ್ಯದಲ್ಲಿ ಹಿಂಗಾರು,ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

02:05 AM Oct 26, 2021 | Team Udayavani |

ಬೆಂಗಳೂರು: ಮುಂಗಾರು ಮುಗಿದು ಹಿಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಒಂದೆಡೆ ನಿರಂತರ ಮಳೆ ರೈತನ ಸಂಕಷ್ಟಕ್ಕೆ ಕಾರಣ ವಾದರೆ ಮತ್ತೊಂದು ಕಡೆ ಬಿತ್ತನೆಗೆ ಪೂರಕವಾಗಿ ಬೇಕಾಗಿರುವ ರಸಗೊಬ್ಬರ ಸಿಗುತ್ತಿಲ್ಲ.

Advertisement

ರಾಜ್ಯದ ರೈತರಿಗೆ ಇದು ಅವಳಿ ಆಘಾತ. ನಿರಂತರ ಮಳೆಯಿಂದ ಕಟಾವಿಗೆ ಬಂದ ಮತ್ತು ಈಗಾಗಲೇ ಬೆಳೆದುನಿಂತ ಲಕ್ಷಾಂತರ ಹೆಕ್ಟೇರ್‌ ಬೆಳೆ ಹಾಳಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಸೃಷ್ಟಿಯಾಗಿದೆ. ಹಾಗೆಯೇ ಹಿಂಗಾರು ಮತ್ತು ನೀರಾವರಿ ಬೆಳೆಗಳಿಗೆ ಅಗತ್ಯ ವಾಗಿರುವ ರಸ ಗೊಬ್ಬರ ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಲ್ಲಿ ವ್ಯತ್ಯಯ ಆಗಿದೆ.

ಏನು ಕಾರಣ?
ಮುಖ್ಯವಾಗಿ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಂಜಕಾಮ್ಲದಂತಹ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. ಕಸ್ಟಮ್ಸ್‌ ಸುಂಕ ಹೆಚ್ಚಳ ಮಾಡಿರುವುದರಿಂದ ಆಮದಿಗೆ ಪೆಟ್ಟುಬಿದ್ದಿದೆ. ಈ ಮಧ್ಯೆ ಸ್ಥಳೀಯವಾಗಿ ಯೂರಿಯಾ ಮತ್ತಿತರ ರಸಗೊಬ್ಬರಗಳ ಉತ್ಪಾದನೆಗೆ ಕಲ್ಲಿದ್ದಲು ಅಭಾವದಿಂದ ಸಮಸ್ಯೆಯಾಗಿದೆ. ಹೆಚ್ಚು ಬೆಲೆ ಪಾವತಿಸಿ ಕಲ್ಲಿದ್ದಲು ಖರೀದಿಸಿದರೂ ತೈಲ ಬೆಲೆ ಏರಿಕೆಯಿಂದ ಸಾಗಾಣಿಕೆ ದುಬಾರಿಯಾಗಿದೆ. ಇದರಿಂದ ರಸಗೊಬ್ಬರ ತಯಾರಕರು ಮತ್ತು ಪೂರೈಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್‌-ಸೆಪ್ಟಂಬರ್‌ನಲ್ಲೇ ಇದರ ಸ್ಪಷ್ಟ ಸುಳಿವು ಸಿಕ್ಕಿತ್ತು. ಈಗ ಬಿಸಿ ತಟ್ಟಲು ಆರಂಭವಾಗಿದೆ.

“ದಾಸ್ತಾನು ಇಲ್ಲ’ ಉತ್ತರ
ರಾಜ್ಯದಲ್ಲಿ ಕೆಲವು ದಿನಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ತೀವ್ರ ಖೋತಾ ಆಗಿದೆ. ಅದರಲ್ಲೂ ಮುಖ್ಯವಾಗಿ ಡಿಎಪಿ ಮತ್ತು ಎಂಒಪಿ ಇದುವರೆಗಿನ ಬೇಡಿಕೆಗೆ ಹೋಲಿಸಿದರೆ, ಕ್ರಮವಾಗಿ ಶೇ. 75 ಮತ್ತು ಶೇ. 65ರಷ್ಟು ಕೊರತೆ ಇದೆ. ಇದರಿಂದ ರೈತರಿಗೆ ಬಿತ್ತನೆ ಮತ್ತುಈಗಾಗಲೇ ಬೆಳೆದು ನಿಂತಿರುವ ಬೆಳೆಗೆ ಸಕಾಲದಲ್ಲಿ ಉಣಿಸಲು ಗೊಬ್ಬರ ಸಿಗುತ್ತಿಲ್ಲ. ಕೆಲವೆಡೆ 15-20 ದಿನಗಳಿಂದ ಅಂಗಡಿ ಮಾಲಕರಿಂದ “ದಾಸ್ತಾನು ಇಲ್ಲ’ ಎಂಬ ಉತ್ತರ ಬರುತ್ತಿದೆ.

ಇದನ್ನೂ ಓದಿ:ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

Advertisement

ರೈತರ ಅಳಲು
ಸಾಮಾನ್ಯವಾಗಿ ಹಿಂಗಾರಿನಲ್ಲಿ ಜೋಳ, ಗೋಧಿ, ಕಡಲೆ, ನೀರಾವರಿ ಬೆಳೆಗಳಾದ ರೇಷ್ಮೆ, ವಿವಿಧ ತರಕಾರಿ ಮತ್ತಿತರ ಬೆಳೆಗಳಿಗೆ ರಸಗೊಬ್ಬರದ ಆವಶ್ಯಕತೆ ಇದೆ. ಇದಕ್ಕಾಗಿ ರೈತರು ನಿತ್ಯ ಹಳ್ಳಿಯಿಂದ ಹತ್ತಿರದ ಪಟ್ಟಣಗಳಿಗೆ ಅಲೆದಾಡ ಬೇಕಾಗಿದೆ. “ಉತ್ತಮ ಮಳೆ ಯಾಗಿದ್ದು ಸಕಾಲದಲ್ಲಿ ಗೊಬ್ಬರ ಪೂರೈಕೆಯಾದರೆ ಉತ್ತಮ ಫ‌ಸಲು ಬರಲಿದೆ. ಆದರೆ ರಸಗೊಬ್ಬರ ಸಿಗುತ್ತಿಲ್ಲ’ ಎಂದು ರೈತರು ಅಲವತ್ತುಕೊಳ್ಳುತ್ತಾರೆ.

ರಾಜ್ಯದ ಅಗತ್ಯ ಎಷ್ಟು?
ರಾಜ್ಯದಲ್ಲಿ ಹಿಂಗಾರು ಮತ್ತು ಬೇಸಗೆಗೆ ಅಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ 16.94 ಲಕ್ಷ ಮೆ.ಟ.ಗಳಷ್ಟು ವಿವಿಧ ರಸಗೊಬ್ಬರ ಅಗತ್ಯ ವಿದೆ. ಈ ಪೈಕಿ ಅ. 25ರ ವರೆಗೆ ಅಂದಾಜು 2.80 ಲಕ್ಷ ಮೆ. ಟನ್‌ ಬೇಕು. ಪೂರೈಕೆ ಆಗಿರುವುದು 2.12 ಲಕ್ಷ ಮೆ. ಟನ್‌ ಮಾತ್ರ. ಇದರಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಖಾಸಗಿ ಪಾಲು ಸೇರಿದೆ. ಪ್ರತ್ಯೇಕವಾಗಿ ತೆಗೆದುಕೊಂಡರೆ, ಡಿಎಪಿ 33 ಸಾವಿರ ಮೆ.ಟ. ಬೇಕಿದ್ದು, ಕೇವಲ 8,257 ಮೆ.ಟ., ಎಂಎಪಿ 10,626 ಮೆ.ಟ. ಪೈಕಿ 3,759 ಮೆ.ಟ. ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಏನಿದು ಡಿಎಪಿ?
ಡಿಎಪಿ ಅಥವಾ ಡೈ ಅಮೋನಿಯಂ ಪಾಸೆ#àಟನ್ನು ಬೀಜಗೊಬ್ಬರ ಎನ್ನಲಾಗುತ್ತದೆ. ಬಿತ್ತನೆ ಮಾಡುವಾಗ ಬೀಜಗಳ ಜತೆಗೆ ಇದನ್ನು ಹಾಕಬೇಕು. ಹಿಂಗಾರಿಗೆ ಜೋಳ, ಗೋಧಿ, ಕಡಲೆ, ಗೋವಿನಜೋಳ, ತೊಗರಿ, ಉದ್ದು, ಶೇಂಗಾ ಸಹಿತ ಹಲವು ಬೆಳೆಗಳಿಗೆ ಈ ಡಿಎಪಿಯನ್ನು ರೈತರು ಬಳಕೆ ಮಾಡುತ್ತಾರೆ.

ಮುಖ್ಯಮಂತ್ರಿ ಬೊಮ್ಮಾಯಿ ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸರಕಾರದೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಅದಕ್ಕೆ ಪೂರಕ ಸ್ಪಂದನೆ ದೊರಕಿದ್ದು, ಸುಮಾರು 12,500 ಮೆ.ಟ. ಡಿಎಪಿ, 10 ಸಾವಿರ ಮೆ.ಟ. ಯೂರಿಯಾ ಸಹಿತ ವಿವಿಧ ರಸಗೊಬ್ಬರ ಪೂರೈಕೆ ಮಾಡುವ ಭರವಸೆ ಸಿಕ್ಕಿದೆ. ಸರಬರಾಜು ಆಗುತ್ತಿದೆ. ಹಾಗಾಗಿ ಸದ್ಯ ಸಮಸ್ಯೆ ಇಲ್ಲ.
-ರಾಜಕುಮಾರ್‌ ಖತ್ರಿ,
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೃಷಿ ಇಲಾಖೆ

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next