Advertisement

ಅಸಾಪ್‌ ಕಮ್ಯೂನಿಟಿ ಸ್ಕಿಲ್‌ ಪಾರ್ಕ್‌ನಿಂದ ಉದ್ಯೋಗ ತರಬೇತಿ

12:30 AM Feb 17, 2019 | |

ಕಾಸರಗೋಡು: ಶಿಕ್ಷಣಾನಂತರ ಉದ್ಯೋಗಕ್ಕಾಗಿ ಏನು ಮಾಡಬೇಕು? ದೇಶದಲ್ಲೇ ಉಳಿಯಬೇಕೇ? ವಿದೇಶಕ್ಕೆ ತೆರಳಿ ಕಾಯಕ ನಿರತನಾಗಬೇಕೇ? ಎಂಬ ವಿಚಾರದಲ್ಲಿ ಇನ್ನು ಆತಂಕ ಬೇಡ. ಅಸಾಪ್‌ ಕಮ್ಯೂನಿಟಿ ಸೆಂಟರ್‌ಗೆ ಬನ್ನಿ, ಅಲ್ಲಿ ನಿಮ್ಮ ಉದ್ಯೋಗ ಸಂಬಂಧ ಭವಿತವ್ಯ ಬೆಳಗಲಿದೆ.

Advertisement

ನೌಕರಿಯ ನೈಪುಣ್ಯದೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗ ಒದಗಿಸುವ ಉದ್ದೇಶ ದೊಂದಿಗೆ ಅಸಾಪ್‌ ಕಮ್ಯೂನಿಟಿ ಸ್ಕಿಲ್‌ ಪಾರ್ಕ್‌ ಶೀಘ್ರದಲ್ಲಿ ಜಿಲ್ಲೆಯಲ್ಲಿ ಪುನರಾರಂಭಗೊಳ್ಳಲಿದೆ. ವಿದ್ಯಾನಗರದ ಸೀತಾಂಗೋಳಿ ರಸ್ತೆಯಲ್ಲಿ ಸ್ಕಿಲ್‌ ಪಾರ್ಕ್‌ನ ಪುನರಾರಂಭ ನಡೆಯಲಿದೆ.ವೈವಿಧ್ಯಮಯ ವೃತ್ತಿಪರ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಉದ್ಯೋಗ ದೊರೆಯುವಂತೆ ಮಾಡುವುದು ಇಲ್ಲಿನ ಪ್ರಧಾನ ಉದ್ದೇಶ.
 
ವಿಶೇಷ ಚೇತನರಿಗೆ ಪ್ರತ್ಯೇಕ ತರಬೇತಿಗಳೂ ಇಲ್ಲಿನ ವಿಶೇಷತೆಯಾಗಿದೆ. ಎ.ಡಿ.ಬಿ. ಸಹಾಯ ದೊಂದಿಗೆ ರಾಜ್ಯ ಸರಕಾರ 13 ಕೋಟಿ ರೂ.   ವೆಚ್ಚದಲ್ಲಿ   ಈ   ಕೇಂದ್ರ  ಜಾರಿಗೊಳಿಸುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ನೌಕರಿ ಎಂಬ ಕನಸು ನನಸಾಗಿಸುವ ವೇಳೆ ಬಹುತೇಕ  ಬಾರಿ ಇತರ ಜಿಲ್ಲೆಗಳ ಯಾ ಇತರ ರಾಜ್ಯಗಳಿಗೆ ತೆರಳಿ ಕಲಿಕೆ ನಡೆಸಬೇಕಾದ ಪರಿಸ್ಥಿತಿ ಇಲ್ಲಿದೆ. ಇಂಥ ಸ್ಥಿತಿಯನ್ನು ಬದಲಿಸಲು ಅಸಾಪ್‌ ಯೋಜನೆ ಪೂರಕವಾಗಿದೆ. ಮೂರು ತಿಂಗಳ ಅವ ಧಿಯ ತರಬೇತಿಯಿಂದ ತೊಡಗಿ ಒಂದು ವರ್ಷದ ತರಬೇತಿ ವರೆಗೆ ಇಲ್ಲಿರುವುದು. 

ಪ್ರತಿ ವಿಷಯದಲ್ಲೂ ಪರಿಣತರು ತರಬೇತಿ ನಡೆಸುವರು.ಕೊಯಮತ್ತೂರು ಮೆರೈನ್‌ ಕಾಲೇಜು ನೇತೃತ್ವದಲ್ಲಿ ಎಲ್ಲ ತರಬೇತಿಗಳೂ ಇಲ್ಲಿ ನಡೆಯಲಿವೆ. ತಿರುವನಂತಪುರದಲ್ಲಿ ಸ್ಕಿಲ್‌ ಪಾರ್ಕ್‌ ಪ್ರಧಾನ ಕಚೇರಿಯಿದೆ.

ಕಟ್ಟಡದ ವಿಶೇಷಗಳು
ಎರಡು ಅಂತಸ್ತಿನ ಕಟ್ಟಡದಲ್ಲಿ 5 ತರಗತಿ ಕೊಠಡಿಗಳು, ನಾಲ್ಕು ತರಬೇತಿ (ಪ್ರಾಕ್ಟಿಕಲ್‌) ಕೊಠಡಿಗಳು, ಕನಿಷ್ಠ 40 ಕಂಪ್ಯೂಟರ್‌ಗಳು ಇರುವ ಅತ್ಯಾಧುನಿಕ ಐ.ಟಿ. ರೂಂ, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯಗಳು, ಲಿಫ್ಟ್‌ ಸೌಲಭ್ಯ ಸಹಿತ ನಾನಾ ಸೌಲಭ್ಯಗಳು ಸ್ಕಿಲ್‌ ಪಾರ್ಕ್‌ನಲ್ಲಿರುವುವು. ಈ ಮೂಲಕ ಜಿಲ್ಲೆಯ ವಿವಿಧ ವಲಯಗಳ  ಪ್ರತಿಭೆಗಳನ್ನು ಒಂದೇ ಛಾವಣಿಯಡಿ ತರುವ ಸಾಧ್ಯತೆ ಅಪಾರ ನಿರೀಕ್ಷೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next