ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲ ಸಂಸ್ಥೆಗಳು ಕನ್ನಡಕ್ಕೆ ಮಾನ್ಯತೆ ನೀಡಬೇಕು ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗುರುವಾರದಂದು ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬದಲಾದ ಉದ್ಯೋಗ ಪರ್ವ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಲ್ಲಿರುವ ಸಂಸ್ಥೆಗಳು ಕನ್ನಡಿಗ ಯುವ ಜನತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಯಾವ ಯಾವ ಹಂತದಲ್ಲಿ ಏನೇನು ಕಾರ್ಯಗಳು ಆಗಬೇಕು ಅವುಗಳನ್ನು ಮಾಡುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಣಾಮಕಾರಿಯಾದ ನಿರ್ಣಯ ತೆಗೆದುಕೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ ಅವರೊಂದಿಗೆ ಹಾಗೂ ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ – ದುಬೈ ಎಕ್ಸ್ ಪೋ ದಲ್ಲಿ ಭಾರತದ ಕ್ರೀಡಾ ತಂತ್ರಜ್ಞಾನಕ್ಕೆ ಡ್ರೀಮ್ ಸ್ಪೋರ್ಟ್ಸ್ ಸಹಯೋಗ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ರಾಜ್ಯದ ಐ.ಟಿ-ಬಿ.ಟಿ ಕ್ಷೇತ್ರಗಳನ್ನೊಳಗೊಂಡಂತೆ ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಸೂದೆ ರೂಪಿಸಲು ಪ್ರಾಧಿಕಾರ ಸತತವಾಗಿ ಒತ್ತಾಯಿಸುತ್ತಿದೆ ಪ್ರಸ್ತಾಪಿಸಿ ಮಸೂದೆಯಲ್ಲಿ ಲೋಕಲ್ ಪೀಪಲ್ (ಕನ್ನಡಿಗರು) ಎಂದರೆ ಕನ್ನಡವನ್ನು ಒಂದು ಭಾಷೆಯನ್ನಾಗಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದಿ ತೇರ್ಗಡೆ ಹೊಂದಿರಬೇಕು ಅಥವಾ ಕರ್ನಾಟಕದಲ್ಲಿ 15 ವರ್ಷ ನೆಲೆಸಿದ್ದು, ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು ಎಂಬ ಅಂಶಗಳನ್ನು ಸೇರಿಸಬೇಕು.
ಉನ್ನತ ಶಿಕ್ಷಣ ಕ್ಯಾಂಪಸ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಅಂಶಗಳು ಇರಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.100ರಷ್ಟು ಪ್ರಾತಿನಿಧ್ಯ ಹಾಗೂ ಮೇಲುಸ್ತುವಾರಿ ಉನ್ನತ ಹುದ್ದೆಗಳಲ್ಲಿಯೂ ಸ್ಥಳೀಯರು ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ಕೋಶದ ಜಂಟಿ ನಿರ್ದೇಶಕ ಎಚ್.ಎಸ್ ಜಯಕುಮಾರ್, ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ.ಚಂದ್ರಕಾಂತ್, ಮಾಹಿತಿ ತಂತ್ರಜ್ಞಾನ ತಜ್ಞ ಟಿ.ಜಿ.ಶ್ರೀನಿಧಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಇದ್ದರು.