Advertisement

ಕಾಲೇಜಿನಲ್ಲೇ ಸಿಗಲಿದೆ ಉದ್ಯೋಗ ಮಾಹಿತಿ

11:25 PM May 14, 2019 | Team Udayavani |

ಖಾಸಗಿ ಹಾಗೂ ಅನುದಾನಿತ ಕಾಲೇಜುಗಳ ಮಾದರಿಯಲ್ಲೇ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪದವೀಧರರಾದ ನಂತರ ವಿಶ್ವದಾದ್ಯಂತ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಕಾರಿಯಾಗುವಂತೆ ಎಲ್ಲ ಸರ್ಕಾರಿ ಪದವಿ ಕಾಲೇಜಿನಲ್ಲೂ ಇದೀಗ ಉದ್ಯೋಗ ಕೋಶ (ಪ್ಲೇಸ್‌ಮೆಂಟ್‌ ಸೆಲ್‌) ಕಾರ್ಯ ನಿರ್ವಹಿಸುತ್ತಿದೆ.

Advertisement

ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನಲ್ಲಿ “ಉದ್ಯೋಗ ಕೋಶ’ ಇರುವ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಆದರೆ, ಪ್ರತಿ ಕಾಲೇಜಿನಲ್ಲೂ ಉದ್ಯೋಗ ಕೋಶ ತೆರೆಯಲಾಗಿದೆ. ಜತೆಗೆ, ಅದಕ್ಕೆ ಸಂಯೋಜಕರನ್ನಾಗಿ ಓರ್ವ ಪ್ರಾಧ್ಯಾಪಕರನ್ನೇ ನೇಮಿಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಕೋಶದ ಸದುಪಯೋಗ ಪ್ರತಿ ವಿದ್ಯಾರ್ಥಿಯೂ ಪಡೆಯಬೇಕು.

ವಿದ್ಯಾರ್ಥಿಗಳಿಗೆ ಪದವಿಯ ನಂತರ ಲಭ್ಯವಿರುವ ಉದ್ಯೋಗಾವಕಾಶಗಳು ಮತ್ತು ಅದಕ್ಕಾಗಿ ಮಾಡಬೇಕಾದ ತಯಾರಿ, ಓದಬೇಕಾದ ಪುಸ್ತಕ ಇತ್ಯಾದಿ ಹತ್ತು ಹಲವು ಮಾಹಿತಿಗಳು ಸುಲಭವಾಗಿ ಈ ಉದ್ಯೋಗ ಕೋಶದಲ್ಲಿ ಸಿಗಲಿದೆ. ಉದ್ಯೋಗ ಕೋಶ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಪ್ರಾಂಶುಪಾಲರಿಗೆ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಂಚಾಲಕರಿಗೆ ಹಾಗೂ ಬೋಧಕವರ್ಗಕ್ಕೆ ಆಗಿಂದಾಗ್ಗೆ ವಿವಿಧ ಕಾರ್ಯಕ್ರಮಗಳನ್ನು ಇಲಾಖೆ ಸಂಘಟಿಸುತ್ತಿರುತ್ತದೆ.

ಉದ್ಯೋಗ ಅರಸಿ ವಿವಿಧ ಸಂಸ್ಥೆಗಳಿಗೆ ಹೋದ ಸಂದರ್ಭದಲ್ಲಿ ಸಂದರ್ಶನಗಳನ್ನು ಎದುರಿಸುವುದು ಹೇಗೆ ಎಂಬುದರ ಅಗತ್ಯ ಸಲಹೆಗಳನ್ನು ಈ ಕೋಶದ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಸ್ವ-ವಿವರ(ರೆಸ್ಯೂಮ್‌) ಆಕರ್ಷಕ ಹಾಗೂ ಮಾಹಿತಿ ಯುಕ್ತವಾಗಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿಕೊಡಲಾಗುತ್ತದೆ. ಸರ್ಕಾರಿ, ಅರೆಸರ್ಕಾರಿ, ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳು, ಬ್ಯಾಂಕಿಂಗ್‌ ಹಾಗೂ ಇತರೆ ವಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ ಉದ್ಯೋಗ ಕೋಶದಲ್ಲಿ ನೀಡಲಾಗುತ್ತದೆ.

ಪದವಿ ಪೂರೈಸಿದವರಿಗೆ ಕಾರ್ಪೊರೇಟ್‌ ವಲಯದಲ್ಲಿರುವ ಉದ್ಯೋಗಾವಕಾಶಗಳು, ಸ್ವ-ಉದ್ಯೋಗ ಮೊದಲಾದ ಹಲವು ವಿಷಯಗಳ ಕುರಿತು ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ ಐಎಎಸ್‌, ಐಪಿಎಸ್‌, ಐಆರ್‌ಎಸ್‌ ಹಾಗೂ ಕೆಎಎಸ್‌ ಮೊದಲಾದ ಕೇಂದ್ರ ಹಾಗೂ ರಾಜ್ಯದ ನಾಗರಿಕ ಸೇವಾ ಪರೀಕ್ಷೆಗಳು, ಪ್ರೊಬೆಷನರಿ ಅಧಿಕಾರಿಗಳ ಪರೀಕ್ಷೆಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನೂ ಈ ಕೋಶದಿಂದ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next