ಕೊಟ್ಟೂರು: ತಾಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ಕೈಹಿಡಿದಿದೆ.
ಕಳೆದ 1 ವರ್ಷದಿಂದ ಕೋವಿಡ್ ಹಾವಳಿ ಪ್ರಭಾವದಿಂದಾಗಿ ವಲಸೆ ಹೋಗಿದ್ದ ಜನರು ತಮ್ಮ ಊರಿನತ್ತ ಮುಖಮಾಡಿ ಕೆಲಸ ಕಾರ್ಯವಿಲ್ಲದೆ ಮನೆಯಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಉದ್ಯೋಗಖಾತ್ರಿ ಯೋಜನೆ ಆಸರೆಯಾಗಿದೆ.
ಪ್ರತಿಯೊಬ್ಬರಿಗೂ 285 ರೂ. ಕೂಲಿ ನೀಡಿ ಅವರ ಅಭ್ಯುದಯಕ್ಕೆ ಕಾರಣವಾಗಿದೆ. ತಾಲೂಕಿಗೆ 14 ಗ್ರಾಮ ಪಂಚಾಯಿತಿಗಳು ಹಾಗೂ 78 ಗ್ರಾಮಗಳು ಮತ್ತು 4 ತಾಂಡಾಗಳು ಒಳಪಡುತ್ತವೆ. ಶೇ. 50ಕ್ಕೂ ಹೆಚ್ಚು ಗ್ರಾಮಗಳು ಮಳೆಯಾಶ್ರಿತ ಬಿತ್ತನೆ ಜಮೀನು ಹೊಂದಿದ್ದಾರೆ. ತಾಲೂಕಿನಲ್ಲಿನ 7012 ಜನ ನೋಂದಾಯಿತ ಕಾರ್ಮಿಕರಿದ್ದಾರೆ. ಈ ಬಾರಿ ಹೊಸದಾಗಿ ಜನರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರೆಲ್ಲರಿಗೂ ಕೆಲಸ ನೀಡಲಾಗಿದೆ.
ಅಲಬೂರು ಗ್ರಾಮದಲ್ಲಿ 706, ಅಂಬಳಿ 592, ಚಿರಿಬಿ 413, ದೂಪದಹಳ್ಳಿ 1619, ಹ್ಯಾಲ್ಯ 183, ಕೆ.ಅಯ್ಯನಹಳ್ಳಿ 370, ಕಾಳಾಪುರ 32, ಕಂದಗಲ್ಲು 344, ಕೋಗಳಿ 948, ನಾಗರಕಟ್ಟೆ 282, ನಿಂಬಳಗೆರೆ 505, ರಾಂಪುರ 322, ತೂಲಹಳ್ಳಿ 232, ಉಜ್ಜನಿ 450 ಒಟ್ಟು 7012 ಜನರು ಪ್ರತಿನಿತ್ಯ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ನಿಂಬಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಸರ್ಕಾರ ರೂಪಿಸಿದೆ. ಪ್ರತಿ ಒಬ್ಬ ರೈತರು ಸದುಪಯೋಗಪಡೆದುಕೊಳ್ಳಲು ಮುಂದಾಗಿದ್ದಾರೆ.
280ರಿಂದ 300ಕ್ಕೂ ಹೆಚ್ಚು ರೈತರು ಕೆಲಸವನ್ನು ಮಾಡಲು ತೊಡಗಿದ್ದಾರೆ ಪ್ರತಿ ದಿನ ಸುತ್ತ ಮುತ್ತಲಿನ ಹಳ್ಳಿ ಹಳ್ಳಿಗಳಲ್ಲಿ 300ರಿಂದ 400 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. 150ಕ್ಕೂ ಹೆಚ್ಚು ವಲಸೆ ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ಇದರಿಂದ ವಲಸೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ.
ರವಿಕುಮಾರ್ ಎಂ.