Advertisement

ಉದ್ಯೋಗ ಖಾತ್ರಿ ಕಾರ್ಮಿಕರ ಮಕ್ಕಳಿಗೂ ಅನ್ನಭಾಗ್ಯ

10:32 AM May 14, 2017 | Team Udayavani |

ಬಾಗಲಕೋಟೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಊಟ ಅಥವಾ ಹಾಲು ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಜಾರಿಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವ ಕಾರ್ಮಿಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದರೆ ಮಧ್ಯಾಹ್ನದ ವೇಳೆ ಅವರಿಗೆ ಊಟ- ಹಾಲು ನೀಡಬೇಕೆನ್ನುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಚರ್ಚೆ ನಡೆದು, ಅಂತಿಮ ತೀರ್ಮಾನಕ್ಕೆ ಸರ್ಕಾರ ಬಂದಿದ್ದು, ಇದು ಶೀಘ್ರ ರಾಜ್ಯಾದ್ಯಂತ ಜಾರಿಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಮಿಕರ ಮಕ್ಕಳಿಗೆ ಅನುಕೂಲ: ಕೂಲಿ ಕೆಲಸಕ್ಕೆ ಬರುವ ಮಹಿಳಾ ಕಾರ್ಮಿಕರು, ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನೂ ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಅವರನ್ನು ನೆರಳಿನಲ್ಲಿ ಆಟವಾಡಲು
ಬಿಟ್ಟು ಅಥವಾ ಜೋಳಿಗೆಯಲ್ಲಿ ಮಲಗಿಸಿ ತಾವು ಕೆಲಸ ಮಾಡುತ್ತಾರೆ. ಜತೆಗೆ ತಮಗೆ, ಮಕ್ಕಳಿಗೆ ಊಟವನ್ನೂ ಕಟ್ಟಿಕೊಂಡು ಬರುತ್ತಾರೆ. ಆದರೆ, ಮಧ್ಯಾಹ್ನದ ವೇಳೆ ಮಕ್ಕಳು ತಮ್ಮ ತಾಯಂದಿರು ತಂದಿರುವ ತಂಗಳು ಊಟ ಮಾಡುವ ಬದಲು, ಬಿಸಿಊಟ ಕೊಡಬೇಕು ಎಂಬುದು ಸರ್ಕಾರದ ಉದ್ದೇಶ. ಹೀಗಾಗಿ, ರಾಜ್ಯದ ಗ್ರಾಪಂ ಮಟ್ಟದಲ್ಲಿ ಕೂಲಿ ಕೆಲಸ ನಡೆಯುವ ಸ್ಥಳದಲ್ಲಿ ಮಧ್ಯಾಹ್ನದ ಬಿಸಿ ಊಟ ಇಲ್ಲವೇ ಶುದ್ಧ ಹಾಲು ಕೊಡಬೇಕು ಎಂಬುದು ಸರ್ಕಾರದ ಆಶಯ.

ಗ್ರಾಪಂಗೆ ನಿರ್ವಹಣೆ ಹೊಣೆ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರ ಮಕ್ಕಳಿಗೆ ಮಧ್ಯಾಹ್ನದ ಊಟ ಅಥವಾ ಹಾಲು ನೀಡಲು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಇದನ್ನು ಹೇಗೆ ನಿರ್ವಹಿಸಬೇಕು ಎಂಬುದು ಈಗಿರುವ ದೊಡ್ಡ ಸವಾಲು. ಆಯಾ ಗ್ರಾಮ ಪಂಚಾಯಿತಿಗೆ ವಹಿಸಲು ಬಹುತೇಕ ತೀರ್ಮಾನ ಕೈಗೊಂಡಿದ್ದು, ಗ್ರಾಪಂ ಮಟ್ಟದಲ್ಲಿ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗದರ್ಶನ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಮಧ್ಯಾಹ್ನ ಕೂಲಿ ಕಾರ್ಮಿಕರ ಮಕ್ಕಳಿಗೆ ಹಾಲು ಅಥವಾ ಬಿಸಿ ಊಟ ಕೊಡಬೇಕು ಎಂಬುದರ ಕುರಿತು ರಾಜ್ಯಮಟ್ಟದಲ್ಲೇ ಚರ್ಚೆಯಾಗಿದೆ. ಈ ಸಂಬಂಧ ಶೀಘ್ರವೇ ಆದೇಶ ಬರಲಿದೆ ಎಂಬ ಮಾಹಿತಿ ಕೇಂದ್ರ ಕಚೇರಿಯಿಂದ ಬಂದಿದೆ.ಆದರೆ, ನಮಗೆ ಇನ್ನೂ ಅಧಿಕೃತ ಆದೇಶ- ಮಾರ್ಗದರ್ಶನ ಬಂದಿಲ್ಲ.
– ಅಮರೇಶ ನಾಯಕ,
ಬಾಗಲಕೋಟೆ ಜಿಪಂ ಉಪ ಕಾರ್ಯದರ್ಶಿ.

Advertisement

– ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next