Advertisement

ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಮಹಿಳೆಯರಿಗೆ ಉದ್ಯೋಗ

11:59 PM Jun 12, 2020 | Sriram |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಜೀವನೋಪಾಯಕ್ಕಾಗಿ ಕೃಷಿ ಹಾಗೂ ವ್ಯಾಪಾರವನ್ನೇ ಹಲವರು ನಂಬಿದ್ದು, ಲಾಕ್‌ಡೌನ್‌ ಪರಿಣಾಮ ವ್ಯಾಪಾರ ನೆಲಕಚ್ಚಿ ಕೂಲಿಗೂ ಕಷ್ಟವಾಗಿತ್ತು. ಈ ಸಮಯದಲ್ಲಿ ಒಕ್ಕೂಟ ಸದಸ್ಯರ ಗುಂಪಿಗೆ ಕೆಲಸ ನೀಡಿ ಸಾರ್ವಜನಿಕ ಕೆಲಸವನ್ನು ಸುಬ್ರಹ್ಮಣ್ಯ ಗ್ರಾ.ಪಂ. ಮಾಡಿ ಮಾದರಿಯಾಗಿದೆ.

Advertisement

ಸುಬ್ರಹ್ಮಣ್ಯದಲ್ಲಿ ಸಂಜೀವಿನಿ ಒಕ್ಕೂಟ ಸದಸ್ಯರು ವ್ಯಾಪಾರ ಕೆಲಸ ಮಾಡುತ್ತಿದ್ದರು. ಕೋವಿಡ್-19 ಪರಿಣಾಮ ಲಾಕ್‌ಡೌನ್‌ನಿಂದ ಇವರ ಜೀವನೋಪಾಯಕ್ಕೆ ಅಡ್ಡಿಯಾಗಿತ್ತು. ಇದಕ್ಕಾಗಿ ಗ್ರಾ.ಪಂ. ಈ ಗುಂಪಿನ ಸದಸ್ಯರಿಗೆ ಉದ್ಯೋಗ ಖಾತರಿಯಲ್ಲಿ ನೋಂದಣಿ ಮಾಡಿ, ಯೋಜನೆಯ ದಿನಗೂಲಿ ಕೆಲಸ ಕೊಡಿಸಿ ಆದಾಯ ದಾರಿ ಕಲ್ಪಿಸಲಾಗಿದೆ.ಸುಳ್ಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರು ಸಂಜೀವಿನಿ ಸಿಬಂದಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಸಂಜೀವಿನಿ ಸಿಬಂದಿ, ಪಂಚಾಯತ್‌ ಸಿಬಂದಿ ಸಭೆ ನಡೆಸಿ ಉದ್ಯೋಗ ಚೀಟಿ ಮಾಡಲು ಆಂದೋಲನ ನಡೆಸಿದ್ದರು. ಈ ಸಂದರ್ಭ ಪಂಚಾಯತ್‌ ಸಿಬಂದಿ ಹೊಸದಾಗಿ ಸುಮಾರು 30 ಉದ್ಯೋಗ ಚೀಟಿಯನ್ನು ಒಕ್ಕೂಟದ ಸದಸ್ಯರಿಗೆ ಮಾಡಿಸಿದ್ದಾರೆ.

ಜೂ. 5ರಂದು 22 ಜನ ಸಂಜೀವಿನಿ ಮಹಿಳೆಯರು ಸುಬ್ರಹ್ಮಣ್ಯದ ದೇವರ ಗದ್ದೆಯಲ್ಲಿ, ತೋಡಿನಲ್ಲಿ ಬೆಳೆದಿರುವ ಕಾಡು ಕಡಿದು, ಕೆಸರು ತೆಗೆದು ಸ್ವತ್ಛಗೊಳಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಮ.ಗಾಂ.ರಾ.ಗ್ರಾ.ಉ.ಖಾ. ಯೋಜನೆಯಲ್ಲಿ ಪಾಲ್ಗೊಂಡವರು. ಕೆಲಸದ ಆರಂಭದಲ್ಲಿ ಎಲ್ಲ ಮಹಿಳೆ ಯರ ದೇಹದ ಉಷ್ಣತೆ ಪರೀಕ್ಷಿಸಿ, ಸರಕಾರದ ಕೋವಿಡ್‌- 19 ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚಿನ ವರೆಗೂ ಸ್ವಂತ ಕೆಲಸವನ್ನೇ ಉದ್ಯೋಗ ಖಾತರಿಯಲ್ಲಿ ಮಾಡಲಾಗುತ್ತಿದ್ದು, ಸಾರ್ವಜನಿಕ ಕೆಲಸವೊಂದನ್ನು ಇದೇ ಮೊದಲು ಹಲವರು ಒಟ್ಟಾಗಿ ಸೇರಿ ಮಾಡಿ ಮಾದರಿಯಾಗಿದ್ದಾರೆ. ಪ್ರತಿ ಯೋರ್ವರಿಗೂ ಕನಿಷ್ಠ 14 ದಿನಗಳ ಕೆಲಸ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸಕೊಡಲು ಇದರಲ್ಲಿ ಅವಕಾಶ ಇದೆ. ಇವರಿಗೆ ದಿನವೊಂದಕ್ಕೆ ರೂ. 275 ಕೂಲಿ ನೀಡಲಾಗುತ್ತಿದೆ.

ಬೇಡಿಕೆಯಂತೆ ಕೆಲಸ ಕೊಡಲು ಸಿದ್ಧ
ಈ ಹಿಂದೆ ತೋಡುಗಳ ಹೂಳನ್ನು ಈ ಯೋಜನೆಯಲ್ಲಿ ತೆಗೆಯಲು ಅವಕಾಶವಿರಲಿಲ್ಲ. ಈಗ ಅವಕಾಶವಿದ್ದು, ಕೆಲಸ ಆರಂಭಿಸಲಾಗಿದೆ. ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮುಂದೆ ಬೇಡಿಕೆಯಂತೆ ಕೆಲಸ ಕೊಡಲು ಸಿದ್ಧರಿದ್ದೇವೆ.
 - ಮುತ್ತಪ್ಪ,
ಪಿಡಿಒ ಸುಬ್ರಹ್ಮಣ್ಯ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next