ಹುಬ್ಬಳ್ಳಿ: ಸಣ್ಣ-ಮಧ್ಯಮ ಕೈಗಾರಿಗಳು ಅಭಿವೃದ್ಧಿಗೊಂಡರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯವೆಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಇಲ್ಲಿನ ಗೋಕುಲ ಕೈಗಾರಿಕಾ ಪ್ರದೇಶದಲ್ಲಿ 6.5 ಕೋಟಿ ವೆಚ್ಚದ ಗಟಾರು ಹಾಗೂ ಮೂಲಸೌಲಭ್ಯ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆಗಳಲ್ಲಿ ರೋಬೋಟಿಕ್ ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು, ಇದರಿಂದ ಉದ್ಯೋಗಗಳು ಕಡಿಮೆಯಾಗುತ್ತಿವೆ. ಹೀಗಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಇಲಾಖೆಯಲ್ಲಿ ಹೆಗ್ಗಣಗಳಿವೆ: ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ ಮಾತನಾಡಿ, ಇಲಾಖೆಯಲ್ಲಿನ ಲೋಪದೋಷಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಇಲಾಖೆಯಲ್ಲಿರುವ ಕೆಲ ಹೆಗ್ಗಣಗಳನ್ನು ಹೊರಹಾಕುವ ಪ್ರಯತ್ನ ನಡೆಸಿದ್ದು, ಆ ನಿಟ್ಟಿನಲ್ಲಿ ಕಾರ್ಯಗಳು ನಡೆದಿವೆ. ಜನರ ಹಣ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳ ನೈಜ ಮುಖವಾಡ ಕಳಚುವ ದಿನಗಳು ದೂರವಿಲ್ಲ ಎಂದರು.
ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಎಲ್ಲರಿಗೂ ಕಾಳಜಿಯಿರಲಿ. ಇಂದಿನ ದಿನದಲ್ಲಿ ಏಕಕಾಲಕ್ಕೆ ಪರಿಹಾರ ನೀಡುವುದು ಸವಾಲಿನ ಕೆಲಸ. ಕೈಗಾರಿಕೆ ನಿವೇಶನ ಪಡೆದವರಿಗೆ ಖರೀದಿ ಪತ್ರ ನೀಡದಿರುವುದು ಯಕ್ಷಪ್ರಶ್ನೆ ಮೂಡಿಸಿದೆ ಎಂದು ಹೇಳಿದರು.
ಹೊಸತನ ಅಳವಡಿಸಿಕೊಂಡಿಲ್ಲ: ಸಣ್ಣ ಕೈಗಾರಿಕೆ ವ್ಯಾಪ್ತಿಯ ತೆಂಗು ನಾರು ನಿಗಮದಲ್ಲಿ ಯಾವುದೇ ಹೊಸತನ ಅಳವಡಿಸಿಕೊಳ್ಳದ ಪರಿಣಾಮ ಇಂದಿಗೂ ನಷ್ಟದಲ್ಲಿದೆ. ತಮಿಳುನಾಡಿನಲ್ಲಿ ತೆಂಗು ನಾರು ನಿಗಮ ಲಾಭದಲ್ಲಿದೆ. ರಾಜ್ಯದಲ್ಲಿ ಅಂದಾಜು 43 ಸಾವಿರ ಕೋಟಿಯಷ್ಟು ತೆಂಗಿನ ಕಚ್ಚಾ ಸಾಮಗ್ರಿ ದೊರೆಯುತ್ತದೆ. ಇದರಿಂದ ಸುಮಾರು 1ರಿಂದ 1.5 ಸಾವಿರ ಕೋಟಿ ರೂ. ವಹಿವಾಟು ಮಾಡಬಹುದಾಗಿದೆ. ಈ ಕುರಿತು ಸಿಎಂ ನೇತೃತ್ವದಲ್ಲಿ ಸಭೆ ಮಾಡಲಾಗಿದೆ ಎಂದು ಸಚಿವ ಶ್ರೀನಿವಾಸ ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ, ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ, ಉ-ಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಪಿ. ನಾಗೇಶ, ಉದ್ಯಮಿಗಳಾದ ನಾಗರಾಜ ದಿವಟೆ, ನಿಂಗಣ್ಣ ಬಿರಾದರ, ಗಿರೀಶ ನಲವಡಿ, ಮಲ್ಲೇಶ ಜಾಡರ, ಮನೋಹರ ಕೊಟ್ಟೂರಶೆಟ್ಟರ, ವಿಜಯ ಹಟ್ಟಿಹೊಳಿ ಮೊದಲಾದವರಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಕೈಗಾರಿಕೆಗೆ ಕೆಐಡಿಬಿಯಿಂದ ಭೂಮಿ ಪಡೆಯುವುದೇ ಕಷ್ಟವಾಗಿದೆ. ಅದು ರೈತರಿಂದ ಕಡಿಮೆ ದರಕ್ಕೆ ಪಡೆದು ಉದ್ಯಮಿಗಳಿಗೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದು, ಕೆಐಡಿಬಿ ರಿಯಲ್ ಎಸ್ಟೇಟ್ ಕಂಪನಿಯಾಗಿದೆ.
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ