ಹೊಸದಿಲ್ಲಿ: ಅಪ ನಗದೀಕರಣದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜತೆ ಕೇಂದ್ರ ಸರಕಾರ ವ್ಯವಹರಿಸಿದ ರೀತಿ ಅಲ್ಲಿನ ನೌಕರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆರ್‌ಬಿಐನ ವ್ಯವಹಾರಗಳಲ್ಲಿ ಕೇಂದ್ರ ಸರಕಾರ ಮೂಗು ತೂರಿಸುತ್ತಿದೆ ಎಂದು ನೌಕರರ ಸಂಘ ಆರೋಪ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, ತಾನು ಆರ್‌ಬಿಐ ಕೆಲಸದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಅದರ ಸಾತಂತ್ರ್ಯ ಹಾಗೂ ಸ್ವಾಯತ್ತೆಯನ್ನು ಸಂಪೂರ್ಣ ವಾಗಿ ಗೌರವಿಸುವುದಾಗಿ ಹೇಳಿದೆ.
ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ಸಂಯುಕ್ತ ವೇದಿಕೆಯು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಪತ್ರವೊಂದನ್ನು ಬರೆದಿದೆ. ಅಪನಗದೀಕರಣದ ಬಳಿಕ ನೌಕರರಲ್ಲಿ ಅಪಮಾನಕ್ಕೆ ಒಳಗಾದ ಭಾವನೆ ಕಾಡುತ್ತಿದೆ. ನಗದು ಸಮನ್ವಯಕ್ಕಾಗಿ ಅಧಿಕಾರಿಯೊಬ್ಬರನ್ನು ನೇಮಕ ಮಾಡುವ ಮೂಲಕ ಕೇಂದ್ರ ಸರಕಾರ ಕೇಂದ್ರೀಯ ಬ್ಯಾಂಕಿನ ಸ್ವಾಯತ್ತೆಯಲ್ಲಿ ಮೂಗು ತೂರಿಸಿದಂತೆ ಆಗಿದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.
ಆರ್‌ಬಿಐ ಮಾಜಿ ಗವರ್ನರ್‌ಗಳಾ ಗಿರುವ ಮನಮೋಹನ್ ಸಿಂಗ್, ಬಿಮಲ್ ಜಲನ್ ಹಾಗೂ ವೈ.ವಿ. ರೆಡ್ಡಿ ಅವರೇ ರಿಸರ್ವ್ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ತಿಳಿಸಿದ್ದಾರೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಹಣಕಾಸು ಸಚಿವಾಲಯ, ಸರಕಾರ ಹಾಗೂ ಆರ್‌ಬಿಐ ನಡುವೆ ಸಾರ್ವಜನಿಕ ಮಹತ್ವದ ಹಲವು ವಿಚಾರಗಳ ಬಗ್ಗೆ ಕಾನೂನು ಪ್ರಕಾರ ಅಥವಾ ರೂಢಿಯಂತೆ ಸಮಾಲೋಚನೆ ಎಲ್ಲೆಲ್ಲಿ ಆಗಬೇಕಿತ್ತೋ ಅಲ್ಲೆಲ್ಲಾ ಮಾತುಕತೆ ಆಗಿದೆ. ಕಾನೂನು ಅಥವಾ ರೂಢಿ ಪ್ರಕಾರ ನಡೆದ ಮಾತುಕತೆಯನ್ನು ಆರ್‌ಬಿಐನ ಸ್ವಾಯತ್ತೆಯಲ್ಲಿ ಮೂಗು ತೂರಿಸಿದ ಕ್ರಮ ಎಂದು ಭಾವಿಸಬಾರದು ಎಂದು ಹೇಳಿದೆ.
ನಾನು ರಿಸರ್ವ್ ಬ್ಯಾಂಕ್ ಮುಖ್ಯಸ್ಥನಾ ಗಿದ್ದರೆ 500 ರೂ. ನೋಟಿನ ರದ್ದತಿ ವಿರೋಧಿಸುತ್ತಿದ್ದೆ. 1000 ರೂ. ನೋಟು
ಮಾತ್ರ ಹಿಂಪಡೆಯಿರಿ ಎಂದು ಹೇಳುತ್ತಿದ್ದೆ. ನನ್ನ ಅಭಿಪ್ರಾಯಕ್ಕೆ ಸರಕಾರ ಬೆಲೆ ನೀಡದೇ ಇದ್ದರೆ ರಾಜೀನಾಮೆ ನೀಡುತ್ತಿದ್ದೆ.
ವೈ.ವಿ. ರೆಡ್ಡಿ, ಆರ್‌ಬಿಐ ಮಾಜಿ ಗವರ್ನರ್
ಕೇಂದ್ರ ಸರಕಾರವನ್ನು ವಿರೋಧಿಸುತ್ತಿ ರುವ ರಿಸರ್ವ್ ಬ್ಯಾಂಕ್ ನೌಕರರು, ಆರ್‌ಬಿಐ ಮಾಜಿ ಗವರ್ನರ್ ರೆಡ್ಡಿ ನಿಜಕ್ಕೂ ಧೈರ್ಯಶಾಲಿಗಳು. ಆರೆಸ್ಸೆಸ್‌ನ ಭಾರತೀಯ ಮಜ್ದೂರ್ ಸಂಘಕ್ಕೆ ಕೂಡ ಈಗ ಜ್ಞಾನೋದಯವಾಗಿ ನೋಟು ರದ್ದತಿ ವಿರೋಧಿಸುತ್ತಿದೆ. ಇದು ಸ್ವಾಗತಾರ್ಹ.
ಪಿ.ಚಿದಂಬರಂ, ಮಾಜಿ ವಿತ್ತ ಸಚಿವ