ಕಲಬುರಗಿ: ತಮ್ಮ ಐದು ತಿಂಗಳ ಬಾಕಿ ವೇತನ ಕೂಡಲೇ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಗುಲಬರ್ಗಾ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ವಿಶ್ವವಿದ್ಯಾಲಯ ಕಳೆದ ಐದು ತಿಂಗಳ ಗುತ್ತಿಗೆ ಆಧಾರದ ನೌಕರರಿಗೆ ವೇತನ ಪಾವತಿ ಮಾಡಿಲ್ಲ. 2016ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಬಾಕಿ ವೇತನ ಹಾಗೂ 2017ರ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ಸೇರಿ ಒಟ್ಟು ಐದು ತಿಂಗಳುಗಳ ವೇತನ ಪಾವತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೌಕರರಿಗೆ ಕನಿಷ್ಠ ವೇತನ ಸಹ ನೀಡಿಲ್ಲ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದ್ದು, ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿಗೆ ತರಬೇಕು. ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಬೇಕು.
ವೈಲ್ಡ್ ಬರ್ಡ್ ಸೆಕ್ಯೂರಿಟಿ ಮತ್ತು ಮೆಂಟೆನನ್ಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಬೇಕು. ಪ್ರೊ| ರಾಜನಾಳಕರ್ ಲಕ್ಷಣ ಅವರ ಏಕಸದಸ್ಯ ಸತ್ಯ ಶೋಧನಾ ಸಮಿತಿಯಿಂದ ವೈಲ್ಡ್ ಬರ್ಡ್ ಸೆಕ್ಯೂರಿಟಿ ಮತ್ತು ಮೆಂಟೆನನ್ಸ್ ಸಂಸ್ಥೆಯ ಅವ್ಯವಹಾರಗಳ ವಿಚಾರಣೆ ನಡೆಸಿ ಸಮಿತಿ ವರದಿ ಜಾರಿಗೊಳಿಸಬೇಕು.
ನೌಕರರಿಗೆ ಸೇರಬೇಕಾದ ಕನಿಷ್ಠ ಕೂಲಿ ವ್ಯತ್ಯಾಸ 98 ಲಕ್ಷ ರೂ.ಗಳನ್ನು ಪುನಃ ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಅವರು ಆಗ್ರಹಿಸಿದರು. ಸಂಘದ ಅಧ್ಯಕ್ಷ ಎಂ.ಬಿ. ಸಜ್ಜನ, ಪ್ರಧಾನ ಕಾರ್ಯದರ್ಶಿ ಗಿರೀಶ ಮಠಪತಿ ಸೇರಿದಂತೆ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.