ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿಯು ಮೂತ್ರವಿಸರ್ಜನೆಗಾಗಿ ಶೌಚಾಲಯಕ್ಕೆ ತೆರಳಲು ಶಕ್ತನಾದರೆ ಅದಕ್ಕಾಗಿ ಕೃತಕವಾಗಿ ಕೊಳವೆ ಅಳವಡಿಸುವುದು (ಯೂರಿನರಿ ಕೆಥಟರೈಸೇಶನ್) ತಪ್ಪುತ್ತದೆ. ಒಂದೆರಡು ದಿನಗಳಲ್ಲಿ ರೋಗಿಯು ಮೆಟ್ಟಿಲುಗಳನ್ನು ಕೂಡ ಏರಿಳಿಯಬಹುದು. ಈ ಮೂಲಕ ಆಸ್ಪತ್ರೆ ವಾಸ ಹಾಗೂ ಸಂಭಾವ್ಯ ಸೋಂಕಿಗೀಡಾಗುವಿಕೆಯ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಅನುಸರಿಸುವ ಅತ್ಯಾಧುನಿಕ ಔಷಧಗಳು ಮತ್ತು ಅರಿವಳಿಕೆ ಹಾಗೂ ಉತ್ಕೃಷ್ಟ ಗುಣಮಟ್ಟದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳು ಕ್ಷಿಪ್ರವಾಗಿ ಗುಣ ಹೊಂದುವುದನ್ನು ಸಾಧ್ಯವಾಗಿಸುತ್ತವೆ. ಈ ಎಲ್ಲ ಪ್ರಕ್ರಿಯೆ, ಚಿಕಿತ್ಸೆಗಳನ್ನು ಪೂರ್ವಯೋಜಿತವಾಗಿ ನಡೆಸುವುದರಿಂದ ಶಸ್ತ್ರಚಿಕಿತ್ಸೆಗೆ ಮುನ್ನವೇ ನಾವು ರೋಗಿಯನ್ನು ಉತ್ತಮ ಸ್ಥಿತಿಯಲ್ಲಿರಿಸಲು ಸಾಧ್ಯವಾಗುತ್ತದೆ.
Advertisement
ತುರ್ತು ಅಥವಾ ಮೂಳೆ ಮುರಿತಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಮೂಳೆ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಐಚ್ಛಿಕ ಅಥವಾ ಆಯ್ಕೆಯ ಶಸ್ತ್ರಚಿಕಿತ್ಸೆ ಎನ್ನುವುದು ಬೇರೆಯದೇ ಆದ ವಿದ್ಯಮಾನವಾಗಿದೆ. ಅದು ವ್ಯಕ್ತಿಯೊಬ್ಬನ ದೈನಿಕ ಬದುಕಿನ ಗುಣಮಟ್ಟವನ್ನು ಬದಲಾಯಿಸಿ ಉತ್ತಮಪಡಿಸುವುದಕ್ಕೆ ಸಂಬಂಧಪಟ್ಟದ್ದು. ಹೀಗಾಗಿ ಸಂದು ಪುನರ್‌ಜೋಡಣೆಗೆ ಸಂಬಂಧಿಸಿ ಹೇಳುವುದಾದರೆ, ಶಸ್ತ್ರಚಿಕಿತ್ಸೆಯಲ್ಲಿ ಅನುಸರಿಸುವ ತಂತ್ರದ ಒಂದು ಸಣ್ಣ ಬದಲಾವಣೆಯೂ ರೋಗಿ ಬಯಸಿದ ಗುಣಮಟ್ಟದ ಜೀವನ ಚಟುವಟಿಕೆಯನ್ನು ಸಾಧಿಸುವಲ್ಲಿ ಮಹತ್ತರ ಧನಾತ್ಮಕ ಪರಿಣಾಮವನ್ನು ಬೀರಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಈ ಶಸ್ತ್ರಚಿಕಿತ್ಸೆಗಳು ನಡೆಯುವ ಪ್ರಮಾಣ ಹೆಚ್ಚುತ್ತಿದ್ದು, ಈ ಸೌಲಭ್ಯವನ್ನು ಒದಗಿಸುವ ಚಿಕಿತ್ಸಾ ಘಟಕಗಳು, ಆಸ್ಪತ್ರೆಗಳು ಇದಕ್ಕೆ ಸಂಬಂಧಿಸಿದ ಉತ್ಕೃಷ್ಟ ಗುಣಮಟ್ಟದ ಆರೈಕೆ ಮತ್ತು ಪುನಶ್ಚೇತನ ಕ್ರಮಗಳನ್ನು ಒಳಗೊಂಡಿರುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.
ಕನ್ಸಲ್ಟಂಟ್ ನೀ ಮತ್ತು ಹಿಪ್ ಸರ್ಜನ್
ಕೆಎಂಸಿ ಆಸ್ಪತ್ರೆ, ಮಂಗಳೂರು