Advertisement

ಜನಾರೋಗ್ಯಕ್ಕೆ ಒತ್ತು ನೀಡಿ

02:48 PM Jul 07, 2017 | Team Udayavani |

ದಾವಣಗೆರೆ: ಅನೈರ್ಮಲ್ಯತೆಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮೇಯರ್‌ ಅನಿತಾಬಾಯಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಕೀಟಜನ್ಯ ರೋಗಗಳ ನಿಯಂತ್ರಣ ಕುರಿತಂತೆ ಗುರುವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಚಿತ್ರಮಂದಿರ, ಹೋಟೆಲ್‌ನವರು ಯಾರೇ ಆಗಲಿ ಅನೈರ್ಮಲ್ಯತೆಗೆ ಕಾರಣರಾಗುತ್ತಿದ್ದಲ್ಲಿ ಅಧಿಕಾರಿಗಳು ಯಾರಿಗೂ ಹೆದರದೆ ಮುಲಾಜಿಲ್ಲದೆ ನೋಟಿಸ್‌ ಜಾರಿ ಮಾಡಿ. ಕ್ರಮದ ನಂತರ ಬರುವುದನ್ನ
ನೋಡಿಕೊಳ್ಳಲಾಗುವುದು ಎಂದರು.

ಸಾರ್ವಜನಿಕರ ಆರೋಗ್ಯ ಚೆನ್ನಾಗಿದ್ದರೆ ಇಡೀ ದಾವಣಗೆರೆಯೇ ಚೆನ್ನಾಗಿರುತ್ತದೆ. ಆರೋಗ್ಯ ವಿಭಾಗದವರು ಉತ್ತಮವಾಗಿಯೇ ಕೆಲಸ ಮಾಡುತ್ತಿದ್ದಾರೆ. ಈ ಎರಡು ತಿಂಗಳು ಜುಲೈ, ಆಗಸ್ಟ್‌ನಲ್ಲಿ ಸೊಳ್ಳೆ ಕಡಿತದಿಂದ ಬರುವಂತಹ ಡೆಂಘೀ, ಚಿಕುನ್‌ ಗುನ್ಯ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಬೇಕು. ಮುಖ್ಯವಾಗಿ ಕೊಳಗೇರಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕು. ಜನಾರೋಗ್ಯ 
ಕಾಪಾಡುವ ನಿಟ್ಟಿನಲ್ಲಿ ಯಾವುದೇ ಆದೇಶವನ್ನಾಗಲಿ ತಕ್ಷಣಕ್ಕೆ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ಸೂಚಿಸಿದರು.

ದಾವಣಗೆರೆ ನಗರದಲ್ಲಿ ಡೆಂಘೀಗೆ ಸಂಬಂಧಿತ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಹಾಗಾಗದಿರಲಿ ಎಂಬುದಾಗಿ ಆಶಿಸುತ್ತೇನೆ. ಕೀಟಜನ್ಯ ರೋಗಗಳು, ಕಾರಣ, ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕರಪತ್ರಗಳ ವಿತರಿಸಲಾಗುವುದು. ಆರೋಗ್ಯ
ಇಲಾಖೆಯವರು ರೈಲ್ವೆ ಹಳಿ ಆಚೆ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಲ್ಲಿ ಜಾಗ ಮತ್ತಿತರ ಸೌಲಭ್ಯ ಮಾಡಿಕೊಡಲಾಗುವುದು. ಸಾರ್ವಜನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾಗಿ ಕೀಟಜನ್ಯ ರೋಗಗಳ ನಿಯಂತ್ರಿಸಿ, ಜನಾರೋಗ್ಯ ಕಾಪಾಡೋಣ ಎಂದು ಮನವಿ ಮಾಡಿದರು.

ಡೆಪ್ಯುಟಿ ಮೇಯರ್‌ ಮಂಜಮ್ಮ ಮಾತನಾಡಿ, ಕೀಟಜನ್ಯ ರೋಗಗಳ ನಿಯಂತ್ರಣ ಕುರಿತಂತೆ ಬಸ್‌ ನಿಲ್ದಾಣ, ಶಾಲಾ-ಕಾಲೇಜು, ಚಿತ್ರಮಂದಿರ ಒಳಗೊಂಡಂತೆ ಎಲ್ಲಾ ಕಡೆ ಹೆಚ್ಚು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯಿಂದ ವಾರಕ್ಕೊಮ್ಮೆಯಾದರೂ ಫಾಗಿಂಗ್‌ ಮತ್ತಿತರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದರು. 

Advertisement

ಸಾರ್ವಜನಿಕ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌. ಶ್ರೀನಿವಾಸ್‌ ಮಾತನಾಡಿ, ಜುಲೈ, ಆಗಸ್ಟ್‌ ತಿಂಗಳಲ್ಲಿ ಸೊಳ್ಳೆ ಮತ್ತಿತರ ಕೀಟಗಳ ಕಡಿತದಿಂದ ಡೆಂಘೀ, ಚಿಕುನ್‌ ಗುನ್ಯಾ ಮತ್ತಿತರ ಆರೋಗ್ಯ ಸಮಸ್ಯೆ ಹೆಚ್ಚು. ಈ ಎರಡು ತಿಂಗಳ ಕಾಲ ಆರೋಗ್ಯ ಇಲಾಖೆ ಒಳಗೊಂಡಂತೆ ಎಲ್ಲಾ ಇಲಾಖೆಯವರು ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಕೀಟಜನ್ಯರೋಗಗಳ ನಿಯಂತ್ರಣ ಮಾಡಬೇಕು ಎಂದು ಸೂಚಿಸಿದರು. ಆಯುಕ್ತ ಬಿ.ಎಚ್‌. ನಾರಾಯಣಪ್ಪ ಮಾತನಾಡಿ, ಆರೋಗ್ಯ ವಿಚಾರವಾಗಿ ಪ್ರತಿಯೊಬ್ಬರೂ
ವೈಯಕ್ತಿಕ ಅಲ್ಲದೆ ಸಮುದಾಯ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ 41 ನೋಡಲ್‌ ಅಧಿಕಾರಿಗಳನ್ನ ನಿಯೋಜಿಸಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಅನುದಾನದ ಕೊರತೆಯೇ ಇಲ್ಲ. ಹಾಗಾಗಿ ಎಲ್ಲಾ 41 ವಾರ್ಡ್‌ನಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ, ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು. ಎಲ್ಲಾ ಇಲಾಖೆಯವರು ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಕೀಟಜನ್ಯರೋಗಗಳ ನಿಯಂತ್ರಣ ಮಾಡಬೇಕು. ಸಾರ್ವಜನಿಕರು ಸಹ ಹೆಚ್ಚಿನ ಮಟ್ಟದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು. ತೆರಿಗೆ, ಹಣಕಾಸು, ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಬಸಪ್ಪ, ನಗರ
ಯೋಜನೆ, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜಿ. ಲಿಂಗರಾಜ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಉಪ ಆಯುಕ್ತ (ಅಭಿವೃದ್ಧಿ) ಎಂ. ಸತೀಶ್‌, ಆರೋಗ್ಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು. ಬಿ.ಎಸ್‌. ವೆಂಕಟೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next