ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಪೂರಕವಾದ ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿವೆ.
ವಿಧಾನಸೌಧದಲ್ಲಿ ಸೋಮವಾರ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಸಂದರ್ಭದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್, ಕಾಸಿಯಾ ಅಧ್ಯಕ್ಷ ಆರ್.ರಾಜು ನೇತೃತ್ವದ ನಿಯೋಗವು ಭೇಟಿಯಾಗಿ, ಕೈಗಾರಿಕೆಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮ ಹಾಗೂ ಅನುದಾನ ಬಿಡುಗಡೆ ಸಂಬಂಧ ಕೋರಿಕೆ ಪತ್ರ ಸಲ್ಲಿಸಿದವು.
ಎಫ್ಕೆಸಿಸಿಐ ಬೇಡಿಕೆ: ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರಗಳಲ್ಲಿ ರೈತರ ಆದಾಯ 2022ಕ್ಕೆ ದ್ವಿಗುಣಗೊಳಿಸಲು ಏಪ್ರಿಲ್ ತಿಂಗಳಿನಲ್ಲಿ ಅಗ್ರೋಫುಡ್ ಟೆಕ್ ಎಕ್ಸ್‌ಪೋ ಆಯೋಜಿಸಿದ್ದು, 3 ಕೋಟಿ ರೂ., ರಾಜ್ಯದಲ್ಲಿ ಎಂಎಸ್‌ಎಂಇ ಕ್ಷೇತ್ರದ ಬೆಳವಣಿಗೆಗೆ ಟೆಕ್ನಾಲಜಿ ಸಮ್ಮಿಟ್ ಆಯೋಜಿಸಲು ಉದೇಶಿಸಲಾಗಿದೆ. ಅದಕ್ಕೆ 1.50 ಕೋಟಿ ರೂ., ಬಹುವೃತ್ತಿಯ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು 10 ಕೋಟಿ ರೂ. ನೀಡಲು ಮನವಿ ನೀಡಲಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಪ್ರತಿ ವಿದ್ಯುತ್ ಕಂಪನಿಯ ಒಂದು ಪ್ರದೇಶ ಪ್ರಯೋಗಿಕವಾಗಿ ಖಾಸಗಿಯವರಿಗೆ ವಹಿಸಬೇಕು, ಕೃಷಿ ಮಾರುಕಟ್ಟೆ ಇಲಾಖೆಯಿಂದ ಜಾರಿಯಾದ 35-ಬಿ ನಮೂನೆ ರದ್ದಾಗಬೇಕು. ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು, ಘನತ್ಯಾಜ್ಯದಿಂದ ಸಿಮೆಂಟ್ ಉತ್ಪಾದನೆಗೆ ಅವಕಾಶ ಕಲ್ಪಿಸಿ ಬೆಂಗಳೂರಿನ ಸುತ್ತಮುತ್ತ ಸಿಮೆಂಟ್ ಘಟಕ ಸ್ಥಾಪಿಸಬೇಕು.
ಎಸ್‌ಎಂಇ ಘಟಕಗಳ ಕಾರ್ಮಿಕರಿಗೆ ವೃತ್ತಿ ತೆರಿಗೆಯಿಂದ ವಿನಾಯಿತಿ, ನಗರ ಪ್ರದೇಶಗಳಲ್ಲಿ ಬಹುಮಹಡಿ ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ಅವಕಾಶ, ಕೈಗಾರಿಕಾ ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಬೇಕು ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ಮಾರ್ಗಸೂಚಿ ನಿಗದಿಪಡಿಸಬೇಕು, ರಾಜ್ಯದಲ್ಲಿ ಇ ವೇ ಬಿಲ್ ಮೊಬಲಗು 1 ಲಕ್ಷ ರೂ.ಗೆ ನಿಗದಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಕಾಸಿಯಾ ಬೇಡಿಕೆ: ದಾಬಸ್‌ಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೇಷ್ಠತಾ ಹಾಗೂ ಅನ್ವೇಷಣಾ ಕೇಂದ್ರಕ್ಕೆ 20 ಕೋಟಿ ರೂ., ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಘಟಕಗಳಿಗೆ ಕೆಎಸ್‌ಎಫ್ಸಿಯಿಂದ ಸಾಲಗಳ ನೀಡಿಕೆಯ ಸಬ್ಸಿಡಿ ಅಂತರ ಸರಿತೂಗಿಸಲು 300 ಕೋಟಿ ರೂ., ರಫ್ತು ವಹಿವಾಟಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಇನ್‌ಲಾಂಡ್ ಕಂಟೈನರ್ ಡಿಪೋ, ತುಮಕೂರಿನಲ್ಲಿ ಸ್ಥಾಪನೆ,
ನವ ಮಂಗಳೂರು ಬಂದರಿಗೆ ಬೆಂಗಳೂರಿನಿಂದ ಸಮರ್ಪಕ ರಸ್ತೆ ಸಂಪರ್ಕ, ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕೆ ಪ್ರದೇಶ, ವಸಾಹತುಗಳ ಮೂಲಸೌಕರ್ಯ ಅಭಿವೃದ್ಧಿ, ಪೀಣ್ಯ ಕೈಗಾರಿಕಾ ನಗರ ಪ್ರಾಧಿಕಾರ ರಚನೆ, ತಾಜ್ಯ ಸಂಸ್ಕರಣೆ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಇಟಿಗಳ ಸ್ಥಾಪನೆ, ಬೆಳಗಾವಿಯಲ್ಲಿ ಫೌಂಡ್ರಿ ಪಾರ್ಕ್ ಸ್ಥಾಪನೆಗೆ 100 ಕೋಟಿ ರೂ. ಅನುದಾನ ಮಂಜೂರು, ಕೈಗಾರಿಕೆಗೆ ಸಂಬಂಧಿಸಿದ ಅರ್ಜಿಗಳ ಇತ್ಯರ್ಥಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.