ನವದೆಹಲಿ: ಡೋಕ್ಲಾಂ ಬಿಕ್ಕಟ್ಟಿನ ನಂತರದಲ್ಲಿ ಭಾರತೀಯ ಸೇನೆ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಲ್ಲದೆ ಚೀನಾ ಜತೆಗಿನ 4000 ಕಿ.ಮೀ ಗಡಿಯಲ್ಲೂ ಮೂಲ ಸೌಕರ್ಯವನ್ನು ಸುಧಾರಿಸಲು ನಿರ್ಧರಿಸಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿನ ಗಡಿ ರಸ್ತೆ ನಿರ್ಮಾಣ ಸಂಸ್ಥೆಗೆ ಹೆಚ್ಚಿನ ಅನುದಾನ ಒದಗಿಸಿ ಈ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ತ್ವರಿತಗೊಳಿಸಲು ನಿರ್ಧರಿಸಲಾಗಿದ್ದು, ಇತರ ಮೂಲಸೌಕರ್ಯಗಳನ್ನೂ ಅಭಿವೃದ್ಧಿಪಡಿಲಾಗುತ್ತದೆ.
ಚೀನಾ ಗಡಿಯಲ್ಲಿರುವ 4 ಪ್ರಮುಖ ಪ್ರದೇಶಗಳಾದ ನಿತಿ, ಲಪುಲೇಖ್, ಥಂಗ್ಲಾ ಮತ್ತು ಸಾಂಗ್‌ಚೊಕ್ಲಾಗೆ 2020ರೊಳಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ. ಅಲ್ಲದೆ ಸೇನೆಯಲ್ಲಿ ಮಹತ್ವದ ಹುದ್ದೆ ಬದಲಾವಣೆಯಾಗಲಿದ್ದು, ಇನ್ನಷ್ಟು ಕಮಾಂಡ್ ಆμàಸರ್ ಗಳು ಮತ್ತು ಜೆಸಿಒಗಳನ್ನು ನೇಮಿಸಿಕೊಳ್ಳಲಾಗುತ್ತದೆ.
ಹಲವರಿಗೆ ಬಡ್ತಿ ನೀಡುವಪ್ರಸ್ತಾವನೆ ಕೂಡ ಅನುಮೋದನೆಗೊಂಡಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಂತೆಯೇ ಸೇನಾ ನೆಲೆ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 58 ನೆಲೆ ಅಭಿವೃದ್ಧಿಪಡಿಸಲಾಗುತ್ತದೆ. ಈ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ ಚೀನಾ ಜತೆಗಿನ ಗಡಿ ನಿರ್ವಹಣೆಗಾಗಿ ವಿಶೇಷ ಕಮಾಂಡರ್ ನೇಮಿಸುವ ಬಗ್ಗೆ ಮಾತುಕತೆ ನಡೆದಿದೆ. ಹೀಗಾಗಿ ಇನ್ನಷ್ಟು ಯೋಧರನ್ನು ಈ ಗಡಿಯಲ್ಲಿ ನೇಮಿಸುವ ಸಾಧ್ಯತೆಯಿದೆ.