Advertisement

ಹೈನುಗಾರಿಕೆ-ಗೋರಕ್ಷಣೆಗೆ ಒತ್ತು ಕೊಡಿ: ಶಿವಲಿಂಗಾನಂದ ಶ್ರೀ

10:31 AM Jan 15, 2019 | |

ಚಳ್ಳಕೆರೆ: ನಾವು ಪ್ರತಿನಿತ್ಯ ಪೂಜಿಸುವ ಭಗವಂತನಿಗೆ ಹಾಲಿನ ಅಭಿಷೇಕ ಮಾಡುತ್ತೇವೆ. ಹಾಗಾಗಿ ಹಾಲು ಅಮೃತಕ್ಕೆ ಸಮಾನವಾಗಿದ್ದು, ಪ್ರತಿಯೊಂದು ಹಂತದಲ್ಲೂ ನಿತ್ಯ ಉಪಯೋಗ ಮಾಡುತ್ತಲೇ ಇರುತ್ತೇವೆ. ಆದ್ದರಿಂದ ಗೋಮಾತೆಯನ್ನು ರಕ್ಷಿಸಿ ಹೈನುಗಾರಿಕೆಗೆ ಒತ್ತು ನೀಡಬೇಕು ಎಂದು ಚಿತ್ರದುರ್ಗ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

Advertisement

ನಗರದ ಪಾವಗಡ ರಸ್ತೆಯ ಶ್ರೀ ಸಾಯಿಮಂದಿರದಲ್ಲಿ ವೆಂಕಟಸಾಯಿ ಸೇವಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಮೂರು ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ನಮ್ಮ ಸಂಪ್ರದಾಯ ಮತ್ತು ಪರಂಪರೆಯಲ್ಲಿ ಗೋವನ್ನು ಮಾತೃಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದೇವೆ. ಹಾಲನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಗೋ ಸಂತತಿ ಉಳಿವಿಗೆ ಪಣ ತೊಡಬೇಕು ಎಂದರು.

ಪ್ರಗತಿಪರ ಕೃಷಿಕ ಹುಲಿಕೆರೆಯ ಈಶಣ್ಣ ಸಜ್ಜನ್‌ ಮಾತನಾಡಿ, ಗೋವು ಕೇವಲ ಪೂಜೆ ಕಾರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಗೋವನ್ನು ನಾವು ಕಾಮಧೇನು ಎಂತಲೂ ಕರೆಯುತ್ತೇವೆ. ಕಾಮಧೇನು ಎಂದರೆ ನಾವು ಅಪೇಕ್ಷೆ ಪಡುವ ಎಲ್ಲವನ್ನೂ ನೀಡುವಂತಹ ಶಕ್ತಿಯುಳ್ಳದ್ದಾಗಿದೆ. ಕಳೆದ ನೂರಾರು ವರ್ಷಗಳಿಂದ ನಮ್ಮ ಸಂಪ್ರದಾಯದ ಮೂಲಕ ಗೋವು ಮತ್ತು ಹಾಲು ಎರಡಕ್ಕೂ ಹೆಚ್ಚು ಗೌರವವನ್ನು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಆರೋಗ್ಯದ ದೃಷ್ಟಿಯಿಂದ ಗೋವಿನಿಂದ ಬರುವ ಸಗಣಿ ಹಾಗೂ ಗಂಜಲದಿಂದ ಅನೇಕ ರೀತಿಯ ವಸ್ತುಗಳನ್ನು ಸಿದ್ಧಪಡಿಸಬಹುದು. ಸಗಣಿಯಿಂದ ವಿಭೂತಿಯನ್ನು ಉತ್ಪಾದಿಸಿದರೆ ಗಂಜಲದಿಂದ ಅನೇಕ ರೀತಿಯ ದ್ರವರೂಪದ ವಸ್ತುಗಳನ್ನು ಪಡೆಯಬಹುದು ಎಂದರು.

Advertisement

ಹೈನುಗಾರಿಕೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ರೈತರು ಹಸು ಸಾಕಾಣಿಕೆಗೆ ಹಿಂದೇಟು ಹಾಕುತ್ತಾರೆ. ಆದರೆ ಹಸುವೊಂದು ವರ್ಷಕ್ಕೆ ಲಕ್ಷಗಟ್ಟಲೇ ಲಾಭ ತಂದುಕೊಡಬಲ್ಲದು. ಹಸು ಸಾಕಾಣಿಕೆ ಮತ್ತು ಅವುಗಳ ಉತ್ಪಾದನೆಯನ್ನು ಮುಂದಿನ ಪೀಳಿಗೆಯೂ ಸಹ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವೆಂಕಟಸಾಯಿ ಟ್ರಸ್ಟ್‌ ಹಾಗೂ ನರಹರಿ ನಗರ ಹಾಲು ಉತ್ಪಾದನಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗೋ ಸಂರಕ್ಷಣೆ ಮತ್ತು ಹಾಲು ಉತ್ಪಾದನೆ ಕುರಿತು ಅನೇಕ ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಹಸು ಸಾಕಾಣಿಕೆ ಸುಲಭವಾದ ಕಾರ್ಯವಾಗಿದ್ದು, ಒಂದು ಹಸು ಸಾಕಿದರೆ ಕುಟುಂಬ ಉತ್ತಮವಾಗಿ ಜೀವನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯೂರು ರಾಘವೇಂದ್ರ, ರೇವಣಸಿದ್ದಪ್ಪ, ತೀರ್ಥಪ್ಪ, ಮಂಜುನಾಥ, ವೆಂಕಟಸಾಯಿ ಟ್ರಸ್ಟ್‌ ನಿರ್ದೇಶಕ ಬಿ.ಸಿ. ವೆಂಕಟೇಶಮೂರ್ತಿ, ನಾಗೇಶ್‌, ಚಿದಾನಂದಮೂರ್ತಿ, ಟಿ.ಜೆ.ತಿಪ್ಪೇಸ್ವಾಮಿ ಭಾಗವಹಿಸಿದ್ದರು. ಹಾಲು ಉತ್ಪಾದನೆಯಲ್ಲಿ ಸಾಧನೆ ಮಾಡಿದ ಚಳ್ಳಕೆರೆಯ ಸುರೇಶ್‌, ಕೊಂಡ್ಲಹಳ್ಳಿಯ ಬಸವರಾಜು, ಹಿರಿಯೂರಿನ ಇಂದಿರಮ್ಮ ಅವರನ್ನು ಸನ್ಮಾನಿಸಲಾಯಿತು. ಎಚ್. ಜಯಣ್ಣ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next