Advertisement

38-40 ಡಿಗ್ರಿ ತಾಪಮಾನ; ಮಧ್ಯಾಹದ ಬಿಸಿಯೂಟಕ್ಕೆ ಅಡ್ಡಿಯಾದ ಬಿಸಿಲು

05:29 PM Mar 30, 2024 | Team Udayavani |

ಉದಯವಾಣಿ ಸಮಾಚಾರ
ದೋಟಿಹಾಳ (ಕೊಪ್ಪಳ:): ಸದ್ಯ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಬೇಸಿಗೆ ರಜೆ ಅವಧಿಯಲ್ಲಿ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸುಡುವ ಬಿಸಿಲಿನಲ್ಲಿ ಶಾಲೆಗೆ ಹೋಗುವಂತಾಗಿದೆ. ರಾಜ್ಯ ಸರ್ಕಾರ ಬರಗಾಲ ಇರುವುದರಿಂದ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಮುಂದುವರಿಸಿದೆ. ಆದರೆ ಇದು ಪಾಲಕರನ್ನು ಚಿಂತೆಗೀಡು ಮಾಡಿದೆ.

Advertisement

ಕೆಲವೆಡೆ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿದೆ. ಆರೋಗ್ಯ ಇಲಾಖೆಯವರು ಮುಂದಿನ ದಿನಗಳಲ್ಲಿ ಉಷ್ಣತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಆರೋಗ್ಯದ ಕಡೆ ಪಾಲಕರು ಹೆಚ್ಚು ಗಮನ ಹರಿಸಬೇಕಿದೆ. ಮಧ್ಯಾಹ್ನ
12ರಿಂದ 4 ಗಂಟೆವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಬೇಡಿ ಎಂದು ಸಲಹೆ ನೀಡುತ್ತಿದೆ. ಹೀಗಾಗಿ ಪಾಲಕರಿಗೆ ಮಕ್ಕಳನ್ನು ಬಿಸಿಯೂಟಕ್ಕೆ ಕಳಿಸಬೇಕೋ ಅಥವಾ ಬಿಡಬೇಕೋ ಎಂಬ ಚಿಂತೆ ಶುರುವಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಹಳ್ಳಿಗಳ ಶಾಲೆಗಳು ಬಹುತೇಕ ಊರ ಹೊರಗಿವೆ. ಹೀಗಾಗಿ ಮಕ್ಕಳು ಬಿಸಿಲಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಗೆ ಹೋಗಿ ಬರಬೇಕು. ಬಿಸಿಲಿನ ಪ್ರಖರ ಕಿರಣಗಳಿಗೆ ಮೈಯೊಡ್ಡುವುದರಿಂದ ಸನ್‌ಸ್ಟ್ರೋಕ್‌ ಆಗುವ
ಸಾಧ್ಯತೆಗಳಿವೆ. ವಿಪರೀತ ತಲೆನೋವಿನ ಜತೆ ಜ್ವರ ಸನ್‌ಸ್ಟ್ರೋಕ್‌ನ ಮುಖ್ಯ ಲಕ್ಷಣ. ತಲೆ ಸುತ್ತು, ವಾಂತಿಯೂ ಇರಬಹುದು. ಒಮ್ಮಿಂದೊಮ್ಮೆ ಪ್ರಜ್ಞಾಹೀನ ರಾಗಬಹುದು. ಸದ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ 38-40 ಡಿಗ್ರಿ ತಾಪಮಾನ ಇದೆ.

ಇಂತಹ ಸ್ಥಿತಿಯಲ್ಲಿ ಮಕ್ಕಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಬದಲು ಕೋವಿಡ್‌ ವೇಳೆ ಮಕ್ಕಳಿಗೆ ನೀಡಿದ ಆಹಾರ ಪದಾರ್ಥಗಳ ರೀತಿಯಲ್ಲಿ ನೀಡಿದರೆ ಒಳ್ಳೆಯದು. ಇದರಿಂದ ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುವುದು ತಪ್ಪುತ್ತದೆ ಎಂದು ಪಾಲಕರು ಹೇಳುತ್ತಿದ್ದಾರೆ.

ಬರಗಾಲದಿಂದ ರಾಜ್ಯದ ಬಹುತೇಕ ಶಾಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಡುತ್ತಿದೆ. ಬಿಸಿಯೂಟ ಅಡುಗೆ ಮಾಡಲು ನೀರೂ ಸಿಗುತ್ತಿಲ್ಲ. ಇನ್ನು ಮಕ್ಕಳ ಊಟದ ತಟ್ಟೆ ತೊಳೆಯಲು ಮಕ್ಕಳು ಪರದಾಡುತ್ತಿದ್ದಾರೆ. ಇಂತಹದರ ಮಧ್ಯೆ ಮಕ್ಕಳು ಊಟಕ್ಕಾಗಿ ಬಿಸಿಲಿನಲ್ಲಿ ಶಾಲೆಗೆ ಹೋಗಬೇಕು. ಇದರ ಬದಲು ಮಕ್ಕಳಿಗೆ ಆಹಾರ ಪದಾರ್ಥ ನೀಡಿದರೆ ಒಳ್ಳೆಯದು ಎನ್ನುವುದು ಪ್ರಜ್ಞಾವಂತರ ಕಳಕಳಿ.

Advertisement

ಕೊಪ್ಪಳ ಜಿಲ್ಲೆಯ 1ರಿಂದ 8ನೇ ತರಗತಿವರೆಗೆ ಸುಮಾರು 1.73 ಲಕ್ಷ ಶಾಲಾ ಮಕ್ಕಳು ಬಿಸಿಯೂಟ ಮಾಡುತ್ತಿದ್ದಾರೆ. ಸದ್ಯ ಬೇಸಿಗೆ ರಜೆ ಅವಧಿ ಯಲ್ಲಿ ಬಿಸಿಯೂಟ ಮಾಡಲು ಶೇ.70 ಮಕ್ಕಳು ಮಾತ್ರ ಒಪ್ಪಿಗೆ ಪತ್ರ ನೀಡಿದ್ದಾರೆ.
ಅನಿತಾ ಎಸ್‌.ಆರ್‌.,
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ, ಕೊಪ್ಪಳ

ಸದ್ಯ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಶಾಲಾ ಮಕ್ಕಳ ಬೇಸಿಗೆ ರಜೆ ಅವಧಿ ಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಬಗ್ಗೆ ರಾಜ್ಯ ಪಿಎಂ ಪೋಷಣಾ ಅಭಿಯಾನ ನಿರ್ದೇಶಕರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಡಾ|ಆಕಾಶ, ಅಪರ ಆಯುಕ್ತರು,
ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ

*ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next